ಲಖನೌ: ‘ತಮ್ಮ ವೋಟ್‌ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ಅಖಿಲೇಶ್ ಅವರಿಗೆ ಸಾಧ್ಯವಾಗದಿರುವುದೇ ಮಹಾಘಟಬಂಧನದ ಸೋಲಿಗೆ ಕಾರಣ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಮಂಗಳವಾರ ಆರೋಪಿಸಿದ್ದರು. ಇದಕ್ಕೆ ಬುಧವಾರ ಎಸ್‌ಪಿ ನಾಯಕ ಅಖಿಲೇಶ್ ಪ್ರತ್ಯುತ್ತರ ನೀಡಿದ್ದಾರೆ.
‘ನಾನು ವಿಜ್ಞಾನದ ವಿದ್ಯಾರ್ಥಿ, ವಿಜ್ಞಾನದ ಎಲ್ಲಾ ಪ್ರಯೋಗಗಳೂ ಯಶಸ್ವಿಯಾಗುವುದಿಲ್ಲ ಎಂಬುದು ನನ್ನ ಅನುಭವ. ಮಹಾಘಟಬಂಧನವೂ ಒಂದು ಪ್ರಯೋಗವಾಗಿತ್ತು, ಅದು ಯಶಸ್ವಿಯಾಗಿಲ್ಲ. ಆದರೆ ಈ ಪ್ರಯತ್ನದಿಂದ ನಮ್ಮ ಕೊರತೆಗಳೇನು ಎಂದು ಕಂಡುಕೊಳ್ಳಲು ಸಾಧ್ಯವಾಗಿದೆ’ ಎಂದು ಅಖಿಲೇಶ್ ಅವರು
ವಿಶ್ಲೇಷಿಸಿದ್ದಾರೆ.
‘ಉತ್ತರಪ್ರದೇಶ ವಿಧಾನಸಭೆಯ 12 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಮತ್ತು 2022ರಲ್ಲಿ ಬರಲಿರುವ ವಿಧಾನಸಭಾ ಚುನಾವಣೆ ಎದುರಿಸಲು ಹೇಗೆ ಸಿದ್ಧತೆ ಮಾಡಬೇಕು ಎಂಬ ಬಗ್ಗೆ ಪಕ್ಷದ ಇತರ ನಾಯಕರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಅವರು ಹೇಳಿದರು.
‘ಸಮಾಜವಾದಿ ಪಕ್ಷವು ಏಕಾಂಗಿಯಾಗಿ ಉಪಚುನಾವಣೆಯನ್ನು ಎದುರಿಸುವುದೇ’ ಎಂಬ ಪ್ರಶ್ನೆಗೆ, ‘ಈಗ ಎಲ್ಲರಿಗೂ ದಾರಿ ಮುಕ್ತವಾಗಿದೆ’ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ಮೈತ್ರಿ ಸಾಧ್ಯ:ವಿಧಾನಸಭೆಯ 12 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್‌ಬಿಎಸ್‌ಪಿ) ಹೇಳಿದೆ.
ಎಸ್‌ಬಿಎಸ್‌ಪಿಯು ಲೋಕಸಭಾ ಚುನಾವಣೆಗೂ ಕೆಲವೇ ದಿನಗಳ ಹಿಂದೆ ಬಿಜೆಪಿಯ ಸಖ್ಯ ತೊರೆದುಮಹಾಘಟಬಂಧನವನ್ನು ಸೇರಿಕೊಂಡಿತ್ತು.
ಏಕಾಂಗಿ ಹೋರಾಟ:ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಮಹಾ ಘಟಬಂಧನದಲ್ಲಿದ್ದ ಇನ್ನೊಂದು ಪಕ್ಷ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಬುಧವಾರ ಹೇಳಿದೆ.
ಲೋಕಸಭಾ ಚುನಾವಣೆಯಲ್ಲಿ ಆರ್‌ಎಲ್‌ಡಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಎಲ್ಲಾ ಕಡೆಗಳಲ್ಲೂ ಸೋಲು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.