ನವದೆಹಲಿ: ವ್ಯಭಿಚಾರವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಹೇಳಿದೆ. ವಸಾಹತು ಆಳ್ವಿಕೆ ಕಾಲದಲ್ಲಿ ರಚನೆಯಾದ ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್ ಅನ್ನು ರದ್ದು ಮಾಡಿದೆ.
ಈ ಸೆಕ್ಷನ್ ಮಹಿಳೆಯ ವ್ಯಕ್ತಿತ್ವವನ್ನು ಕುಬ್ಜಗೊಳಿಸುತ್ತದೆ ಮತ್ತು ಆಕೆಯು ಗಂಡನ ಗುಲಾಮಳು ಎಂಬಂತೆ ನೋಡುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಪೀಠದಲ್ಲಿದ್ದ ಎಲ್ಲ ಐವರು ನ್ಯಾಯಮೂರ್ತಿಗಳೂ ಸರ್ವಾನುಮತದ ತೀರ್ಪು ಕೊಟ್ಟಿದ್ದಾರೆ. ಇದು ವಿವೇಚನೆಯೇ ಇಲ್ಲದ ಸೆಕ್ಷನ್. ಪುರಾತನವಾದ ಮತ್ತು ಮಹಿಳೆಯರ ಸಮಾನತೆ ಮತ್ತು ಸಮಾನ ಅವಕಾಶದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಮಹಿಳೆಯನ್ನು ತಾರತಮ್ಯದಿಂದ ನೋಡುವುದು ಸಂವಿಧಾನ ವಿರೋಧಿ ಎಂದು ಪೀಠವು ಹೇಳಿದೆ.
ವ್ಯಭಿಚಾರವು ಅಪರಾಧವಲ್ಲದೆ ಇದ್ದರೂ ಅದನ್ನು ತಪ್ಪು ಎಂದೇ ಪರಿಗಣಿಸಬೇಕಾಗುತ್ತದೆ. ಮದುವೆ ಮುರಿದುಕೊಳ್ಳಲು ಅಥವಾ ವಿಚ್ಛೇದನಕ್ಕೆ ಇದನ್ನು ಕಾರಣವಾಗಿ ಬಳಸಿಕೊಳ್ಳಬಹುದು ಎಂಬುದರಲ್ಲಿ ಅಣುವಿನಷ್ಟು ಅನುಮಾನವೂ ಇಲ್ಲ. ಮನೆಯನ್ನು ಮುರಿಯುವ ವ್ಯಭಿಚಾರದಂತಹ ಕೃತ್ಯಕ್ಕೆ ಸಾಮಾಜಿಕ ಸಮ್ಮತಿ ದೊರೆಯುವುದು ಸಾಧ್ಯವೇ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ವ್ಯಭಿಚಾರವು ಅಪರಾಧ ಅಲ್ಲ, ಆದರೆ, ವ್ಯಭಿಚಾರದಿಂದಾಗಿ ಮತ್ತೊಬ್ಬ ಸಂಗಾತಿಗೆ ಆಗುವ ವೇದನೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡರೆ ಮತ್ತು ಈ ಆತ್ಮಹತ್ಯೆಗೆ ಒಬ್ಬ ಸಂಗಾತಿಯ ವ್ಯಭಿಚಾರವೇ ಕಾರಣ ಎಂಬ ಪುರಾವೆಗಳನ್ನು ಸಲ್ಲಿಸಿದರೆ ವ್ಯಭಿಚಾರವನ್ನು ಆತ್ಮಹತ್ಯೆಗೆ ಕುಮ್ಮಕ್ಕು ಎಂದು ಪರಿಗಣಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಮತ್ತು ನ್ಯಾಯಮೂರ್ತಿ ಖಾನ್ವಿಲ್ಕರ್ ಹೇಳಿದ್ದಾರೆ.
**
497ನೇ ಸೆಕ್ಷನ್‌ನಲ್ಲಿ ಏನಿದೆ?
ಬೇರೊಬ್ಬನ ಹೆಂಡತಿ ಜತೆಗೆ ಆತನ ಸಮ್ಮತಿ ಅಥವಾ ಪರೋಕ್ಷ ಒಪ್ಪಿಗೆ ಇಲ್ಲದೆ ಅತ್ಯಾಚಾರವೆಂದು ಪರಿಗಣಿಸಲಾಗದ ರೀತಿಯಲ್ಲಿ ವ್ಯಕ್ತಿಯೊಬ್ಬರು ನಡೆಸುವ ಲೈಂಗಿಕ ಸಂಪರ್ಕವನ್ನು ವ್ಯಭಿಚಾರ ಎಂದು ಗುರುತಿಸಲಾಗುವುದು. ಇದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ ಐದು ವರ್ಷದವರೆಗೆ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ಇತ್ತು.
**
ಮದುವೆಯ ಪಾವಿತ್ರ್ಯ ರಕ್ಷಿಸುತ್ತಿರಲಿಲ್ಲ
ಸೆಕ್ಷನ್ 497 ಅನ್ನು ಸಮರ್ಥಿಸುವ ವಾದವನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ವಿವಾಹದ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಈ ಸೆಕ್ಷನ್ ಅತ್ಯಗತ್ಯ ಎಂದು ಪ್ರತಿಪಾದಿಸಿತ್ತು. ಆದರೆ ಈ ವಾದವನ್ನು ಸಂವಿಧಾನ ಪೀಠವು ಒಪ್ಪಿಲ್ಲ.
ವಿವಾಹಿತ ವ್ಯಕ್ತಿಯು ಅವಿವಾಹಿತ ಮಹಿಳೆ ಅಥವಾ ವಿಧವೆಯ ಜತೆಗೆ ಲೈಂಗಿಕ ಸಂಪರ್ಕ ಹೊಂದುವುದು ಕೂಡ ವಿವಾಹದ ಪಾವಿತ್ರ್ಯಕ್ಕೆ ಧಕ್ಕೆ ತರಬಹುದು. ಆದರೆ, ಸೆಕ್ಷನ್ 497ರ ಅಡಿಯಲ್ಲಿ ಇದರ ವಿರುದ್ಧ ದೂರು ಕೊಡಲು ಅವಕಾಶ ಇರಲಿಲ್ಲ. ಹಾಗಾಗಿ ವಿವಾಹದ ಪಾವಿತ್ರ್ಯ ರಕ್ಷಣೆಗೆ ಈ ಸೆಕ್ಷನ್ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹೇಳಿದ್ದಾರೆ.
**
ಗಮನಿಸಬೇಕಾದ ಅಂಶಗಳು
*ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿದರೆ ಅದು ವೈವಾಹಿಕ ಜೀವನದ ಅತ್ಯಂತ ಖಾಸಗಿತನದಲ್ಲಿ ಹಸ್ತಕ್ಷೇಪ
*1860ರಲ್ಲಿ ಜಾರಿಗೆ ಬಂದ ಈ ಸೆಕ್ಷನ್ ಸ್ವಾತಂತ್ರ್ಯ, ಘನತೆ, ಸಮಾನತೆ, ತಾರತಮ್ಯಕ್ಕೆ ಒಳಗಾಗದೆ ಇರುವ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ
*ಅವಿವಾಹಿತ ಮಹಿಳೆ ಅಥವಾ ವಿಧವೆಯ ಜತೆಗೆ ವಿವಾಹೇತರ ಸಂಬಂಧ ಹೊಂದುವುದನ್ನು ಈ ಸೆಕ್ಷನ್ ಅಪರಾಧ ಎಂದು ಪರಿಗಣಿಸುವುದಿಲ್ಲ. ಹಾಗೆಯೇ ವ್ಯಭಿಚಾರ ಎಸಗುವ ಗಂಡಸಿನ ಹೆಂಡತಿಯನ್ನು ಸಂತ್ರಸ್ತೆ ಎಂದೂ ಪರಿಗಣಿಸುವುದಿಲ್ಲ. ಹಾಗಾಗಿ ಆಕೆಯು ದೂರು ಕೊಡುವುದಕ್ಕೂ ಸಾಧ್ಯ ಇರಲಿಲ್ಲ. ಇದು ನಿಜಕ್ಕೂ ಆಶ್ಚರ್ಯ ತರುವಂತಹ ವಿಚಾರ
*ಲೈಂಗಿಕ ಸ್ವಾಯತ್ತೆಯು ಪ್ರತಿ ವ್ಯಕ್ತಿಯ ಘನತೆಯ ಅತಿ ಮುಖ್ಯವಾದ ಭಾಗ. ಮದುವೆಯಾದ ತಕ್ಷಣ ಈ ಹಕ್ಕು ಇಲ್ಲ ಎಂದು ಪರಿಗಣಿಸುವುದು ಸಂವಿಧಾನದ ಮೌಲ್ಯಕ್ಕೆ ವಿರುದ್ಧ
*ದಂಪತಿಯಲ್ಲಿ ಒಬ್ಬರು ಮದುವೆ ಮುರಿಯುವುದಕ್ಕೆ ಕಾರಣವಾಗುವ ಕೃತ್ಯಗಳನ್ನು ಎಸಗುವುದನ್ನು ಅಪರಾಧ ಎಂದು ಪರಿಗಣಿಸುವ ಅಪರಾಧ ಪ್ರಕ್ರಿಯಾ ಸಂಹಿತೆಯ 198ನೇ ಸೆಕ್ಷನ್ ಅನ್ನು ಕೂಡ ರದ್ದುಪಡಿಸಲಾಗಿದೆ.
ಪೀಠ: ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ
ನ್ಯಾಯಮೂರ್ತಿಗಳು: ಆರ್.ಎಫ್. ನಾರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್, ಇಂದೂ ಮಲ್ಹೋತ್ರಾ
**
ಮಹಿಳೆಯನ್ನು ತಾರತಮ್ಯದಿಂದ ನೋಡುವ ಯಾವುದೇ ಅಂಶ ಸಾಂವಿಧಾನಿಕ ಅಲ್ಲ. ಗಂಡನು ಹೆಂಡತಿಯ ಮಾಲೀಕ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಸಮಯ ಬಂದಿದೆ.
–ಚಂದ್ರಚೂಡ್, ನ್ಯಾಯಮೂರ್ತಿ
**
ಮಹಿಳೆಯ ಲೈಂಗಿಕ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸುವುದು ಮತ್ತು ಸಮ್ಮತಿಯ ಲೈಂಗಿಕ ಸಂಬಂಧವನ್ನು ಅಪರಾಧ ಎನ್ನುವುದು ಹಕ್ಕಿನ ಉಲ್ಲಂಘನೆಯಲ್ಲದೆಬೇರೇನೂ ಅಲ್ಲ.
–ಇಂದೂ ಮಲ್ಹೋತ್ರಾ, ನ್ಯಾಯಮೂರ್ತಿ
**
ವ್ಯಭಿಚಾರವು ಅಸಂತೃಪ್ತ ವೈವಾಹಿಕ ಜೀವನಕ್ಕೆ ಕಾರಣವಾಗಿರಬೇಕೆಂದಿಲ್ಲ, ಅಸಂತೃಪ್ತ ವೈವಾಹಿಕ ಜೀವನವೇ ವ್ಯಭಿಚಾರದ ಕಾರಣ ಆಗಿರಬಹುದು.
-ದೀಪಕ್ ಮಿಶ್ರಾ,ಮುಖ್ಯ ನ್ಯಾಯಮೂರ್ತಿ
**
ತರಾವರಿ ಪ್ರತಿಕ್ರಿಯೆಗಳು
ಲಿಂಗ ತಟಸ್ಥ ತೀರ್ಪು
ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಅಪ್ರಸ್ತುತ ಕಾನೂನನ್ನು ರದ್ದು ಮಾಡಿರುವ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆ ಆಕೆಯ ಗಂಡನ ಆಸ್ತಿಯಲ್ಲ. ಇದು ಮಹಿಳೆಯರ ಪರವಾದ ತೀರ್ಪು ಮಾತ್ರವಲ್ಲ. ಬದಲಿಗೆ ಲಿಂಗ ತಟಸ್ಥ ತೀರ್ಪೂ ಹೌದು
–ರೇಖಾ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ
*
ಮಹಿಳಾ ವಿರೋಧಿ
ವ್ಯಭಿಚಾರದಲ್ಲಿ ತೊಡಗುವ ಪುರುಷ ಮತ್ತು ಮಹಿಳೆ ಇಬ್ಬರನ್ನೂ ಶಿಕ್ಷೆಯ ವ್ಯಾಪ್ತಿಗೆ ತಂದು ಈ ಸೆಕ್ಷನ್ ಅನ್ನು ಲಿಂಗ ತಟಸ್ಥವಾಗಿಸಬೇಕಿತ್ತು. ಆದರೆ ವ್ಯಭಿಚಾರವನ್ನೇ ಅಪರಾಧಮುಕ್ತಗೊಳಿಸಲಾಗಿದೆ. ಇದರಿಂದ ಮಹಿಳೆಯರಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದು ಮಹಿಳಾ ವಿರೋಧಿ ತೀರ್ಪು
–ಸ್ವಾತಿ ಮಲಿವಾಲ್, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ
*
ಈ ಕಾನೂನು ಅಪ್ರಸ್ತುತವಾಗಿತ್ತು
ಮಹಿಳೆಯು ಆಕೆಯ ಗಂಡನ ಆಸ್ತಿ ಎಂದು ಪರಿಗಣಿಸಲಾಗುತ್ತಿದ್ದ ಮನಸ್ಥಿತಿಯ, ವಸಾಹತುಶಾಹಿ ಕಾಲದ ಪಳೆಯುಳಿಕೆಯಾಗಿದ್ದ ಈ ಕಾನೂನು ಈಗಿನ ಆಧುನಿಕ ಸಮಾಜದಲ್ಲಿ ಅಪ್ರಸ್ತುತವಾಗಿತ್ತು. ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಇನ್ನೂ ಹಲವು ಲಿಂಗಸೂಕ್ಷ್ಮ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡುತ್ತದೆ ಎಂದು ಆಶಿಸೋಣ
–ಅಸ್ಮಿತಾ ಬಸು, ಅಮ್ನೆಸ್ಟಿ ಇಂಡಿಯಾ
*
ಇದು ಖಾಸಗಿತನದ ಹಕ್ಕೇ...
ಈ ತೀರ್ಪನ್ನು ನಾವು ಮೂಲಭೂತ ಹಕ್ಕುಗಳ ನೆಲೆಯಲ್ಲಿ ಪರಿಶೀಲಿಸಬೇಕಿದೆ. ಪುರುಷನಾಗಲೀ, ಮಹಿಳೆಯಾಗಲೀ ಇಬ್ಬರೂ ಕಾನೂನಿನ ಮುಂದೆ ಒಂದೇ ಎಂದು ಈ ತೀರ್ಪು ಹೇಳುತ್ತಿದೆಯೇ ಅಥವಾ ಇದು ಖಾಸಗಿತನದ ಹಕ್ಕೇ ಎನ್ನುತ್ತಿದೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕೇ ಎಂಬ ನಿಟ್ಟಿನಲ್ಲಿ ಈ ತೀರ್ಪನ್ನು ವಿಮರ್ಶೆಗೆ ಒಳಪಡಿಸಬೇಕು
–ನಲಿನ್ ಕೊಹ್ಲಿ, ಬಿಜೆಪಿ ವಕ್ತಾರ
*
ಅಸಮಾನತೆಗೆ ಕಾರಣವಾಗಿತ್ತು
ವ್ಯಭಿಚಾರಿ ಗಂಡನ ವಿರುದ್ಧ ಈ ಕಾನೂನಿನ ಅಡಿ ದೂರು ನೀಡಲು ಪತ್ನಿಗೆ ಅವಕಾಶ ಇರಲಿಲ್ಲ. ಜತೆಗೆ ವ್ಯಭಿಚಾರಿ ಪತ್ನಿಯ ವಿರುದ್ಧವೂ ದೂರು ನೀಡಲು ಸಾಧ್ಯವಿರಲಿಲ್ಲ. ಈ ಮೂಲಕ ಈ ಕಾನೂನು ಅಸಮಾನತೆಗೆ ಕಾರಣವಾಗಿತ್ತು. ಅಲ್ಲದೆ ಮಹಿಳೆಯನ್ನು ಒಬ್ಬ ಸ್ವತಂತ್ರ್ಯ ವ್ಯಕ್ತಿ ಎಂದು ಪರಿಗಣಿಸುವುದನ್ನೇ ನಿರಾಕರಿಸುತ್ತಿತ್ತು. ಹೀಗಾಗಿ ವ್ಯಭಿಚಾರವನ್ನು ಅಪರಾಧಮುಕ್ತೊಗೊಳಿಸಿದ್ದು ಅತ್ಯಂತ ಮಹತ್ವದ ನಿರ್ಧಾರ
–ಸುಶ್ಮಿತಾ ದೇವ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
*
ಬಹುಪತ್ನಿತ್ವಕ್ಕೆ ಕಾರಣವಾಗುತ್ತದೆ
ಈ ನಿರ್ಧಾರವು ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸಿದಕ್ಕೆ ಸಮನಾಗಿದೆ. ಈಗ ಪುರುಷರು ಮಹಿಳೆಯರಿಗೆ ತಲಾಖ್ ನೀಡುವುದಿಲ್ಲ, ಬದಲಿಗೆ ಬಿಟ್ಟುಹೋಗುತ್ತಾರೆ ಅಷ್ಟೆ. ಈ ತೀರ್ಪು ಬಹುಪತ್ನಿತ್ವಕ್ಕೆ ಕಾರಣವಾಗುತ್ತದೆ. ಅದಂತೂ ಮಹಿಳೆಗೆ ನರಕವೇ ಸರಿ. ಈ ತೀರ್ಪು ಮಹಿಳೆಯರಿಗೆ ಹೇಗೆ ನೆರವಾಗುತ್ತದೆ ಎಂಬುದು ತಿಳಿಯುತ್ತಿಲ್ಲ. ನ್ಯಾಯಾಲಯವು ಇದನ್ನು ಸ್ಪಷ್ಟಪಡಿಸಬೇಕು
–ರೇಣುಕಾ ಚೌಧರಿ, ಕಾಂಗ್ರೆಸ್ ನಾಯಕಿ
*
ಮಹಿಳೆ ನೆರವಿಗೆ ಮತ್ತೊಂದು ಕಾಯ್ದೆಯಿದೆ
ಮಹಿಳೆಯನ್ನು ಪುರುಷನ ಆಸ್ತಿ ಎಂದು ಪರಿಗಣಿಸುತ್ತಿದ್ದ ಕಾನೂನನ್ನು ರದ್ದು ಮಾಡುವ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಗಂಡನ ವ್ಯಭಿಚಾರದಿಂದ ಪತ್ನಿಗೆ ತೀರಾ ಹಿಂಸೆಯಾಗುತ್ತದೆ. ಇದರ ವಿರುದ್ಧ ಮಹಿಳೆಯು ಕಾನೂನಿನ ಮೊರೆ ಹೋಗಲು ಮತ್ತು ಪರಿಹಾರವನ್ನು ಕೇಳಲು ಕೌಂಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಅವಕಾಶವಿದೆ
–ಬೃಂದಾ ಕಾರಟ್, ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.