ADVERTISEMENT

ರಫೇಲ್‌ ಖರೀದಿ ಕುರಿತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 15:05 IST
Last Updated 12 ಏಪ್ರಿಲ್ 2021, 15:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿ ಫ್ರಾನ್ಸ್‌ ಮಾಧ್ಯಮಗಳು ಪ್ರಕಟಿಸಿರುವ ‘ಹೊಸ ವಿಷಯಗಳ’ ಹಿನ್ನೆಲೆಯಲ್ಲಿ ವಹಿವಾಟು ಕುರಿತು ಹೊಸದಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಯುದ್ಧ ವಿಮಾನಗಳ ಉತ್ಪಾದಕ ಸಂಸ್ಥೆಯಾದ ಡಾಸೊ ಏವಿಯೇಷನ್, ಭಾರತದ ಮಧ್ಯವರ್ತಿಗೆ 1 ಮಿಲಿಯನ್‌ ಯೂರೊ ‘ಉಡುಗೊರೆ’ ನೀಡಿದೆ ಎಂದು ಸಂಸ್ಥೆ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿ ವಕೀಲ ಎಂ.ಎಲ್‌.ಶರ್ಮಾ ಅವರು ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠವು ಪುರಸ್ಕರಿಸಿತು. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣಿಯನ್ ಅವರೂ ಈ ಪೀಠದಲ್ಲಿದ್ದಾರೆ. ನಿಯಮಗಳ ಪ್ರಕಾರವೇ ಕೆಲ ವಾರಗಳ ನಂತರ ಈ ಪ್ರಕರಣವು ವಿಚಾರಣೆಗೆ ಬರಲಿದೆ.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ, ಡಾಸೊ ರಿಲಯನ್ಸ್‌ ಏರೋಸ್ಪೇಸ್ ಸಂಸ್ಥೆ ಹಾಗೂ ಡಿಎಫ್‌ಸಿಎಸ್‌ ಸೊಲೂಷನ್ಸ್‌ ಸಂಸ್ಥೆಯ ಸುಶೇನ್‌ ಮೋಹನ್‌ ಗುಪ್ತಾ ಅವರನ್ನು ಪ್ರತಿವಾದಿಗಳಾಗಿ ಅರ್ಜಿದಾರರು ಹೆಸರಿಸಿದ್ದಾರೆ.

ಆರೋಪಿಗಳು ರಕ್ಷಣಾ ಸಚಿವಾಲಯದಿಂದ ಗೌಪ್ಯ ದಾಖಲೆಗಳನ್ನು ಪಡೆದಿದ್ದು, ಈ ಮೂಲಕ ಸೆಪ್ಟೆಂಬರ್‌ 23, 2016ರಂದು ರಫೇಲ್‌ ವಹಿವಾಟು ನಡೆಯುವಂತೆ ನೋಡಿಕೊಂಡಿದ್ದಾರೆ. ಡಾಸೊ ಏವಿಯೇಷನ್ ಸಂಸ್ಥೆಯು ಭಾರತದ ಮಧ್ಯವರ್ತಿಗೆ 1 ಮಿಲಿಯನ್‌ ಯೂರೊ ಅನ್ನು ಉಡುಗೊರೆ ನೀಡಿದೆ ಎಂಬ ಎಎಫ್‌ಎ (ಫ್ರಾನ್ಸ್‌ನ ಸಿಎಜಿ) ವರದಿಯಲ್ಲಿ ದಾಖಲಾಗಿದೆ. ಹೀಗಾಗಿ, ವಿಚಾರಣೆ ಅಗತ್ಯವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.