ನವದೆಹಲಿ: ಫತೇಪುರ್ ಸಿಕ್ರಿಯಲ್ಲಿರುವ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
‘ಹೆರಿಟೇಜ್ ಸಿಟಿ’ಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ ನೇತೃತ್ವದ ಪೀಠವು, ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ, ಉತ್ತರ ಪ್ರದೇಶ ಸರ್ಕಾರ, ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ನೋಟಿಸ್ ಜಾರಿ ಮಾಡಿದೆ.
ಫತೇಪುರ್ ಸಿಕ್ರಿ ನಿವಾಸಿ ಅಮರನಾಥ ಪರಾಶರ್ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
‘ಪುರಾತನ ಸ್ಮಾರಕ ಮತ್ತು ಹೆರಿಟೇಜ್ ನಗರವನ್ನು ಸಂರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್16 ವರ್ಷಗಳ ಹಿಂದೆ ಸೂಚನೆ ನೀಡಿತ್ತು. ಆದರೆ ಸಂಸ್ಥೆಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಕೆಲಸಗಳು ಹಾಗೇ ಬಾಕಿ ಉಳಿದಿವೆ. ಅಲ್ಲದೆ ಅಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಮಾರಕಗಳು ನಶಿಸುತ್ತಿವೆ. ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.