ಕೋಲ್ಕತಾ: ನಾರದಾ ಮಾರುವೇಷದ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್ ಮಂಗಳವಾರ ಅವಕಾಶ ನೀಡಿದೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್‌ನ ನಾಯಕರನ್ನು ಗೃಹಬಂಧನದಲ್ಲಿರಿಸುವ ತೀರ್ಪನ್ನು ಪ್ರಶ್ನಿಸಿ ಸಿಬಿಐ ಅರ್ಜಿ ಸಲ್ಲಿಸಿತ್ತು.
ಕಲ್ಕತ್ತ ಹೈಕೋರ್ಟ್‌ನ ಪಂಚಸದಸ್ಯ ಪೀಠವು ಈಗಾಗಲೇ ನಾರದಾ ಮಾರುವೇಷ ಕಾರ್ಯಾಚರಣೆಯ ಪ್ರಕರಣವನ್ನು ಆಲಿಸುತ್ತಿದೆ. ಸಿಬಿಐ ಪರ ವಾದಿಸುತ್ತಿರುವ ಸೋಲಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಅರ್ಜಿ ಹಿಂಪಡೆಯಲು ಮತ್ತು ಹೈಕೋರ್ಟ್‌ನಲ್ಲಿ ಎಲ್ಲ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದ ಮಹತ್ವದ ಕುರಿತು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ನಮ್ಮ ಹೇಳಿಕೆಯು ಪ್ರಕರಣಕ್ಕೆ ಸಂಬಂಧಿಸಿದ ಅಭಿಪ್ರಾಯವಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿಆರ್ ಗವಾಯಿ ತಿಳಿಸಿದ್ದಾರೆ.
ಮೇ 21ರಂದು ಪಶ್ಚಿಮ ಬಂಗಾಳದ ಬಂಧಿತ ಸಚಿವರು, ಓರ್ವ ಶಾಸಕ ಮತ್ತು ಕೋಲ್ಕತಾದ ಮಾಜಿ ಮೇಯರ್ ಅವರನ್ನು ಜೈಲಿನಿಂದ ಗೃಹಬಂಧನಕ್ಕೆ ಸ್ಥಳಾಂತರ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ನಾರದಾ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಫಿರ್ಹಾದ್ ಹಕಿಮ್, ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಕೋಲ್ಕತಾದ ಮಾಜಿ ಮೇಯರ್ ಸೊವನ್ ಚಟರ್ಜಿ ಅವರನ್ನು ಕಳೆದ ಸೋಮವಾರ ಸಿಬಿಐ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.