ADVERTISEMENT

‘ಬುಲ್ಡೋಜರ್‌ ನ್ಯಾಯ’ಕ್ಕೆ ಸುಪ್ರೀಂ ಕೋರ್ಟ್‌ ಅಂಕುಶ

ಆರೋಪಿಗಳ ಮನೆ ಧ್ವಂಸ ಕೆಲಸವನ್ನು ಅರಣ್ಯ ನ್ಯಾಯಕ್ಕೆ ಹೋಲಿಸಿದ ನ್ಯಾಯಪೀಠ

ಪಿಟಿಐ
Published 13 ನವೆಂಬರ್ 2024, 23:47 IST
Last Updated 13 ನವೆಂಬರ್ 2024, 23:47 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ಬುಲ್ಡೋಜರ್ ನ್ಯಾಯ’ವನ್ನು ಕಾನೂನಿನ ಅಸ್ತಿತ್ವಕ್ಕೆ ಬೆಲೆಯನ್ನೇ ನೀಡದ ‘ಅರಣ್ಯ ನ್ಯಾಯ’ದ ಜೊತೆ ಹೋಲಿಸಿರುವ ಸುಪ್ರೀಂ ಕೋರ್ಟ್‌, ಕಟ್ಟಡಗಳ ಧ್ವಂಸಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ‍ಬುಧವಾರ ಪ್ರಕಟಿಸಿದೆ.

ನೋಟಿಸ್‌ ನೀಡದೆ ಯಾವ ಕಟ್ಟಡವನ್ನೂ ಧ್ವಂಸಗೊಳಿಸುವಂತೆ ಇಲ್ಲ ಹಾಗೂ ನೋಟಿಸ್ ನೀಡಿದ ನಂತರ ಅದಕ್ಕೆ ಉತ್ತರ ನೀಡಲು ಸಂಬಂಧಪಟ್ಟ ವ್ಯಕ್ತಿಗೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಪ್ರಜೆಗಳಿಗೆ ಶಿಕ್ಷೆ ವಿಧಿಸಲು ನ್ಯಾಯಾಂಗಕ್ಕೆ ಇರುವ ಅಧಿಕಾರವನ್ನು ಕಾರ್ಯಾಂಗವು ತಾನು ಚಲಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ಸ್ಪಷ್ಟಪಡಿಸಿದೆ.

ADVERTISEMENT

ಕಾನೂನನ್ನು ಸರಿಯಾಗಿ ಪಾಲನೆ ಮಾಡದೆ ಕಟ್ಟಡಗಳನ್ನು ಧ್ವಂಸಗೊಳಿಸುವುದು ಇನ್ನೊಬ್ಬರ ಭಾವನೆಗಳಿಗೆ ಬೆಲೆಯನ್ನೇ ಕೊಡದ ಕೃತ್ಯ, ಅಂತಹ ಕೃತ್ಯಗಳನ್ನು ಕಾನೂನಿನ ಶಕ್ತಿಯನ್ನು ಬಳಸಿ ನಿಗ್ರಹಿಸಬೇಕು ಎಂದು ಪೀಠವು ಹೇಳಿದೆ.

ಕಾರ್ಯಾಂಗವು ನ್ಯಾಯಾಧೀಶನಂತೆ ವರ್ತಿಸಿ, ವ್ಯಕ್ತಿಯೊಬ್ಬ ಆರೋಪಿ ಎಂಬ ಕಾರಣಕ್ಕೆ ಆತನ ಮನೆ ಉರುಳಿಸುವ ಶಿಕ್ಷೆಯನ್ನು ವಿಧಿಸಿದರೆ, ಅದು ಅಧಿಕಾರವನ್ನು ಪ್ರತ್ಯೇಕಿಸುವ ತತ್ವಕ್ಕೆ ವಿರುದ್ಧ. ಅಧಿಕಾರಿಗಳು ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಪಾಲಿಸದೆ, ಸಹಜ ಪ್ರಕ್ರಿಯೆಯ ತತ್ವಕ್ಕೆ ಅನುಗುಣವಾಗಿ ವರ್ತಿಸದೆ, ಬುಲ್ಡೋಜರ್‌ ಬಳಸಿ ಕಟ್ಟಡವನ್ನು ಧ್ವಂಸಗೊಳಿಸುವ ಭೀತಿಯ ದೃಶ್ಯವು ಕಾನೂನಿಗೆ ಬೆಲೆಯೇ ಇಲ್ಲದ, ಬಲಿಷ್ಠನು ಮಾಡಿದ್ದೆಲ್ಲವೂ ಸರಿ ಎನ್ನುವ ಸ್ಥಿತಿಯನ್ನು ನೆನಪಿಸುತ್ತದೆ.
ಸುಪ್ರೀಂ ಕೋರ್ಟ್‌

ಬುಲ್ಡೋಜರ್‌ಗಳು ಮನೆಗಳನ್ನು ಧ್ವಂಸಗೊಳಿಸುವ, ಮಹಿಳೆಯರು, ಮಕ್ಕಳು ಹಾಗೂ ವೃದ್ಧರನ್ನು ರಾತ್ರೋರಾತ್ರಿ ಸೂರಿಲ್ಲದವರನ್ನಾಗಿಸುವ ದೃಶ್ಯಗಳು ಬಹಳ ಭೀತಿ ಮೂಡಿಸುವಂಥವು ಎಂದು ಪೀಠವು ಹೇಳಿದೆ. ಇಂತಹ ಕೃತ್ಯಗಳಿಗೆ ಸಂವಿಧಾನದ ಅಡಿಯಲ್ಲಿ ಮಾನ್ಯತೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ತಾನು ರೂಪಿಸಿರುವ ಮಾರ್ಗಸೂಚಿಗಳು ರಸ್ತೆ, ಬೀದಿ, ಪಾದಚಾರಿ ಮಾರ್ಗ, ರೈಲು ಮಾರ್ಗಕ್ಕೆ ಹೊಂದಿಕೊಂಡಿರುವ ಜಾಗಗಳು, ನದಿ ಅಥವಾ ಜಲ ಮೂಲಗಳಲ್ಲಿ ಇರುವ ಅನಧಿಕೃತ ಕಟ್ಟಡಗಳಿಗೆ ಅನ್ವಯ ಆಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. ಹಾಗೆಯೇ, ಕಟ್ಟಡ ಧ್ವಂಸಕ್ಕೆ ನ್ಯಾಯಾಲಯದಿಂದ ಆದೇಶ ಇದ್ದರೆ, ಅಂತಹ ಪ್ರಕರಣಗಳಿಗೆ ಕೂಡ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ ಎಂದು ಅದು ಹೇಳಿದೆ.

ಕವಿ ಪ್ರದೀಪ ಬರೆದ ಸಾಲುಗಳ ಉಲ್ಲೇಖ

ಸ್ವಂತ ಮನೆಯೊಂದನ್ನು ಹೊಂದಲು ಪ್ರತಿ ವ್ಯಕ್ತಿಯೂ ಬಯಸುತ್ತಾನೆ, ಈ ಕನಸು ನುಚ್ಚುನೂರಾಗುವುದನ್ನು ಆತ ಇಷ್ಟಪಡುವುದಿಲ್ಲ ಎಂಬುದನ್ನು ಹೇಳಲು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಖ್ಯಾತ ಹಿಂದಿ ಕವಿ ಪ್ರದೀಪ ಅವರು ಬರೆದ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದಾರೆ.

ಪ್ರದೀಪ ಅವರು ದೇವನಾಗರಿ ಲಿಪಿಯಲ್ಲಿ ಬರೆದಿರುವ ಸಾಲುಗಳನ್ನು ನ್ಯಾಯಮೂರ್ತಿ ಗವಾಯಿ ಅವರು ತೀರ್ಪಿನ ಆರಂಭದಲ್ಲಿ ಉಲ್ಲೇಖಿಸಿದ್ದಾರೆ.

‘ಅಪ್ನಾ ಘರ್, ಅಪ್ನಾ ಆಂಗನ್ ಹೊ, ಇಸ್ ಖ್ವಾಬ್‌ ಮೆ ಹರ್ ಕೊಯಿ ಜೀತಾ ಹೈ; ಇನ್ಸಾನ್ ಕೆ ದಿಲ್‌ ಕಿ ಯೆ ಚಾಹತ್ ಹೈ ಕಿ ಎಕ್ ಘರ್ ಕಾ ಸಪ್ನಾ ಕಭಿ ನಾ ಛೂಟೆ’ ಎಂಬುದು ಆ ಸಾಲು.

ಇದರ ಭಾವಾನುವಾದ ಹೀಗಿದೆ:

ಪ್ರತಿಯೊಬ್ಬನೂ ತನ್ನದೇ ಮನೆ, ತನ್ನದೇ ಅಂಗಳ ಇರಬೇಕೆಂಬ ಬಯಕೆ ಹೊತ್ತು ಜೀವಿಸುತ್ತಾನೆ. ಹೃದಯಕ್ಕೆ ಹತ್ತಿರವಾದ ಈ ಕನಸು ಯಾವತ್ತಿಗೂ ಭಗ್ನಗೊಳ್ಳದೇ ಇರಲಿ ಎಂದೇ ಭಾವಿಸುತ್ತಾನೆ.

ಈ ಸಾಲುಗಳ ಮೂಲಕ ಕವಿ ಪ್ರದೀಪ ಅವರು ಸೂರಿನ ಮಹತ್ವವನ್ನು ಹೇಳಿದ್ದಾರೆ ಎಂದು ಗವಾಯಿ ಬರೆದಿದ್ದಾರೆ. ಸೂರನ್ನು ಹೊಂದುವ ಹಕ್ಕು ಸಂವಿಧಾನದ 21ನೆಯ ವಿಧಿಯು ನೀಡಿರುವ ಹಕ್ಕುಗಳ ಒಂದು ಆಯಾಮ ಎಂದು ಪೀಠವು ಹೇಳಿದೆ.

ನ್ಯಾಯಪೀಠ ರೂಪಿಸಿರುವ ಮಾರ್ಗಸೂಚಿ ಹೀಗಿದೆ...

  • ಸ್ಥಳೀಯ ಆಡಳಿತ ಸಂಸ್ಥೆಯ ನಿಯಮಗಳಲ್ಲಿ ಉಲ್ಲೇಖವಾಗಿರುವಷ್ಟು ಸಮಯ ನೀಡಿ ಅಥವಾ 15 ದಿನಗಳ ಸಮಯ ನೀಡಿ (ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ಪರಿಗಣಿಸಬೇಕು) ನೋಟಿಸ್‌ ಜಾರಿಗೊಳಿಸದ ಹೊರತು ಧ್ವಂಸ ಕಾರ್ಯ ಕೈಗೊಳ್ಳುವಂತಿಲ್ಲ. 15 ದಿನ ಎಂಬುದು ವ್ಯಕ್ತಿಯು ನೋಟಿಸ್‌ ‍ಪಡೆದ ದಿನದಿಂದ ಪರಿಗಣಿತವಾಗಬೇಕು.

  • ಕಟ್ಟಡ ಧ್ವಂಸಕ್ಕೆ ಆದೇಶ ಹೊರಡಿಸಿದ ನಂತರವೂ, ಸಂಬಂಧಪಟ್ಟ ವ್ಯಕ್ತಿಗೆ ಆ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲು ತುಸು ಕಾಲಾವಕಾಶ ನೀಡಬೇಕು.

  • ಅಧಿಕಾರಿಗಳು ಕೆಲವು ಸಮಯದವರೆಗೆ ತಮ್ಮ ಕೈಗಳನ್ನು ಕಟ್ಟಿ ಕುಳಿತರೆ ಆಕಾಶ ಕಳಚಿ ತಲೆಮೇಲೆ ಬೀಳುವುದಿಲ್ಲ. ವ್ಯಕ್ತಿಯು ಕಟ್ಟಡ ಧ್ವಂಸ ಆದೇಶವನ್ನು ಪ್ರಶ್ನಿಸದೆ ಇರಲು ಬಯಸಿದರೆ, ಆ ವ್ಯಕ್ತಿಗೆ ಕಟ್ಟಡವನ್ನು ತೆರವು ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು 15 ದಿನಗಳ ಅವಕಾಶ ನೀಡಬೇಕು.

  • 15 ದಿನಗಳಲ್ಲಿ ಆತ ಏನೂ ಮಾಡದೆ ಇದ್ದರೆ, ನೋಟಿಸ್‌ಗೆ ಮೇಲ್ಮನವಿ ಪ್ರಾಧಿಕಾರ ಅಥವಾ ನ್ಯಾಯಾಲಯ ತಡೆ ನೀಡಿಲ್ಲದಿದ್ದರೆ, ಧ್ವಂಸ ಕಾರ್ಯಕ್ಕೆ ಮುಂದಾಗಬಹುದು.

  • ಕಟ್ಟಡದ ಮಾಲೀಕನಿಗೆ ಅಥವಾ ಕಟ್ಟಡದಲ್ಲಿ ಇರುವವನಿಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ನೋಟಿಸ್ ಕಳುಹಿಸಬೇಕು. ನೋಟಿಸ್‌ ಪ್ರತಿಯನ್ನು ಕಟ್ಟಡದ ಹೊರಭಾಗದಲ್ಲಿ ಸ್ಪಷ್ಟವಾಗಿ ಎದ್ದುಕಾಣುವಂತೆ ಅಂಟಿಸಬೇಕು.

  • ನೋಟಿಸ್‌ ನೀಡುವಾಗ ಹಿಂದಿನ ದಿನಾಂಕವನ್ನು ಅದರಲ್ಲಿ ನಮೂದಿಸಲಾಗುತ್ತದೆ ಎಂಬ ಆರೋಪಗಳು ಇನ್ನು ಮುಂದೆ ಬರಬಾರದು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌, ನೋಟಿಸ್‌ ನೀಡಿದ ತಕ್ಷಣವೇ ಅದರ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅಥವಾ ಕಲೆಕ್ಟರ್‌ಗೆ ಡಿಜಿಟಲ್ ಸ್ವರೂಪದಲ್ಲಿ, ಇ–ಮೇಲ್ ಮೂಲಕ ಮಾಹಿತಿ ಒದಗಿಸಬೇಕು ಎಂದು ಸ್ಪಷ್ಟಪಡಿಸಿದೆ.

  • ಅಕ್ರಮ ನಿರ್ಮಾಣದ ಸ್ವರೂಪದ ಬಗ್ಗೆ, ನಿರ್ದಿಷ್ಟವಾದ ಕಾನೂನಿನ ಉಲ್ಲಂಘನೆಗಳ ಬಗ್ಗೆ ಹಾಗೂ ಕಟ್ಟಡ ಧ್ವಂಸಕ್ಕೆ ಕಾರಣ ಏನು ಎಂಬ ಬಗ್ಗೆ ನೋಟಿಸ್‌ನಲ್ಲಿ ವಿವರಗಳು ಇರಬೇಕು.

  • ನೋಟಿಸ್ ಪಡೆದ ವ್ಯಕ್ತಿಯು ಸಲ್ಲಿಸಬೇಕಿರುವ ದಾಖಲೆಗಳು ಯಾವುವು, ಆ ವ್ಯಕ್ತಿಯ ಖುದ್ದು ವಿಚಾರಣೆ ಯಾವ ದಿನ ನಡೆಯಲಿದೆ, ಯಾವ ಅಧಿಕಾರಿಯು ವಿಚಾರಣೆ ನಡೆಸಲಿದ್ದಾರೆ ಎಂಬುದನ್ನು ನೋಟಿಸ್‌ನಲ್ಲಿ ತಿಳಿಸಿರಬೇಕು

  • ಎಲ್ಲ ಸ್ಥಳೀಯ ಸಂಸ್ಥೆಗಳು ಮೂರು ತಿಂಗಳ ಒಳಗೆ ಡಿಜಿಟಲ್ ಪೋರ್ಟಲ್ ಒಂದನ್ನು ಆರಂಭಿಸಬೇಕು. ಆ ಪೋರ್ಟಲ್‌ನಲ್ಲಿ ನೋಟಿಸ್‌ ನೀಡಿರುವ ವಿವರ, ಅದಕ್ಕೆ ದೊರೆತ ಪ್ರತಿಕ್ರಿಯೆಯ ಮಾಹಿತಿ ಹಾಗೂ ಆದೇಶ ಹೊರಡಿಸಿದ್ದರ ಬಗ್ಗೆ ಮಾಹಿತಿ ಲಭ್ಯವಿರಬೇಕು.

  • ಸಂಬಂಧಪಟ್ಟ ಪ್ರಾಧಿಕಾರವು ನೋಟಿಸ್ ಪಡೆದ ವ್ಯಕ್ತಿಯ ವಾದವನ್ನು ಆಲಿಸಿದ ನಂತರವೇ ಅಂತಿಮ ಆದೇಶವನ್ನು ಹೊರಡಿಸಬೇಕು. ವ್ಯಕ್ತಿಯ ವಾದ ಏನಿತ್ತು ಎಂಬುದನ್ನು ಅಂತಿಮ ಆದೇಶದಲ್ಲಿ ದಾಖಲಿಸಬೇಕು, ಆತನ ವಾದವನ್ನು ಪ್ರಾಧಿಕಾರವು ಒಪ್ಪದೆ ಇದ್ದಾಗ, ಅದಕ್ಕೆ ಕಾರಣ ವಿವರಿಸಬೇಕು.

  • ಕಟ್ಟಡವನ್ನು ಧ್ವಂಸಗೊಳಿಸುವ ತೀವ್ರವಾದ ಕ್ರಮ ಮಾತ್ರವೇ ಏಕೈಕ ಆಯ್ಕೆಯಾಗಿದ್ದು ಏಕೆ ಎಂಬುದನ್ನು ಅಂತಿಮ ಆದೇಶದಲ್ಲಿ ವಿವರಿಸಬೇಕು. ಕಟ್ಟಡದಿಂದ ಆಗಿರುವ ಕಾನೂನು ಉಲ್ಲಂಘನೆಯು ಗಂಭೀರ ಸ್ವರೂಪದ್ದೇ, ಅದು ಗಂಭೀರ ಸ್ವರೂಪದ ಉಲ್ಲಂಘನೆ ಎಂದಾದರೆ ಅದಕ್ಕೆ ಕಾರಣ ಏನು, ಅದರ ಕೆಲವು ಭಾಗಗಳನ್ನು ಮಾತ್ರ ತೆರವು ಮಾಡುವ ಆಯ್ಕೆ ಏಕೆ ಲಭ್ಯವಿಲ್ಲ ಎಂಬುದನ್ನೂ ವಿವರಿಸಬೇಕು.

  • ಕಟ್ಟಡ ಧ್ವಂಸ ಕಾರ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಬೇಕು. ಅದನ್ನು ಕಾಪಿಡಬೇಕು. ಆ ವಿಡಿಯೊವನ್ನು ಮುನಿಸಿಪಲ್ ಆಯುಕ್ತರಿಗೆ ರವಾನಿಸಬೇಕು, ಅದನ್ನು ಪೋರ್ಟಲ್ ಮೂಲಕ ಪ್ರದರ್ಶಿಸಬೇಕು. ಧ್ವಂಸಕ್ಕೂ ಮೊದಲು ವಿಸ್ತೃತವಾದ ಪರಿಶೀಲನಾ ವರದಿಯನ್ನು ಸಿದ್ಧಪಡಿಸಬೇಕು, ಆ ವರದಿಗೆ ಇಬ್ಬರು ಪಂಚರ ಸಹಿ ಇರಬೇಕು.

  • ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಸಂಬಂಧ ಪಟ್ಟವರ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಜರುಗಿಸಲಾಗುತ್ತದೆ.

‘ನ್ಯಾಯಾಧೀಶನಂತೆ ವರ್ತಿಸಲು ಕಾರ್ಯಾಂಗಕ್ಕೆ ಅಧಿಕಾರವಿಲ್ಲ’

ನವದೆಹಲಿ: ಕಾರ್ಯಾಂಗದ ಅಧಿಕಾರಿಗಳು ನ್ಯಾಯಾಧೀಶರಾಗಲು ಅವಕಾಶ ಇಲ್ಲ, ಆರೋಪಿಯೊಬ್ಬ ಅಪರಾಧಿ ಎಂದು ತೀರ್ಮಾನಿಸಿ, ಆತನ ಆಸ್ತಿಯನ್ನು ಧ್ವಂಸಗೊಳಿಸುವ ಮೂಲಕ ಶಿಕ್ಷೆ ವಿಧಿಸಲು ಅವರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಈ ರೀತಿ ಮಾಡುವುದು ಅಧಿಕಾರದ ವ್ಯಾಪ್ತಿಯನ್ನು ಮೀರುವುದಕ್ಕೆ ಸಮ ಎಂದು ಅದು ಹೇಳಿದೆ. ವ್ಯಕ್ತಿಯೊಬ್ಬ ಆರೋ‍‍ಪಿ ಎಂಬ ಕಾರಣಕ್ಕೆ ಅಥವಾ ಆತ ಅಪರಾಧಿ ಎಂಬ ಕಾರಣಕ್ಕೆ ಆತ ಮನೆಯನ್ನು ಕಾನೂನಿನ ಪ್ರಕ್ರಿಯೆಯನ್ನು ಪಾಲಿಸದೆ ಧ್ವಂಸಗೊಳಿಸುವುದು ಸಂಪೂರ್ಣವಾಗಿ ಸಂವಿಧಾನಬಾಹಿರ ಎನ್ನಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ ಎಂದು ಕೂಡ ಕೋರ್ಟ್ ಹೇಳಿದೆ.

‘ಕಾರ್ಯಾಂಗದ ಅಧಿಕಾರಿಗಳು ನ್ಯಾಯಾಧೀಶರಂತೆ ವರ್ತಿಸಿದರೆ, ಅಧಿಕಾರದ ಮಿತಿಗಳನ್ನು ಹೇಳುವ ತತ್ತ್ವಕ್ಕೆ ವಿರುದ್ಧವಾಗಿ ನಡೆದಂತಾಗುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರಿಗಳನ್ನು ಉತ್ತರದಾಯಿ ಆಗಿಸಬೇಕು ಎಂಬುದು ನಮ್ಮ ಅಭಿಪ್ರಾಯ’ ಎಂದು ಪೀಠವು ಸ್ಪಷ್ಟಪಡಿಸಿದೆ.

ಅತ್ಯಂತ ಹೇಯವಾದ ಅಪರಾಧವನ್ನು ಎಸಗಿದ ವ್ಯಕ್ತಿ ಅಪರಾಧಿ ಎಂದು ಘೋಷಿಸಿದಾಗಲೂ, ಕಾನೂನಿನ ಅಡಿಯಲ್ಲಿ ಇರುವ ಕಡ್ಡಾಯ ಪ್ರಕ್ರಿಯೆಗಳನ್ನು ಪಾಲನೆ ಮಾಡದೆ ಶಿಕ್ಷೆ ವಿಧಿಸಲು ಅವಕಾಶ ಇಲ್ಲ. ಹೀಗಿರುವಾಗ, ಯಾವುದೋ ಒಂದು ಅಪರಾಧ ಎಸಗಿದ ಆರೋಪವನ್ನು ಮಾತ್ರ ಹೊತ್ತಿರುವ ವ್ಯಕ್ತಿಯು ಅಥವಾ ಆ ಅಪರಾಧ ಎಸಗಿರುವ ವ್ಯಕ್ತಿಯು ತನ್ನ ಆಸ್ತಿಯ ಧ್ವಂಸದ ಶಿಕ್ಷೆಗೆ ಗುರಿಯಾಗಬಹುದೇ? ಇದಕ್ಕೆ ಉತ್ತರ ‘ಇಲ್ಲ’ ಎಂದು ಪೀಠವು ಖಚಿತ ದನಿಯಲ್ಲಿ ಹೇಳಿದೆ.

ಆರೋಪಿಯು ಅಪರಾಧಿ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ಆತ ನಿರ್ದೋಷಿ ಎಂಬ ತ‌ತ್ತ್ವವು ಯಾವುದೇ ಕಾನೂನು ವ್ಯವಸ್ಥೆಯ ಪಾಲಿಗೆ ಅಡಿಗಲ್ಲು ಇದ್ದಂತೆ ಎಂಬುದನ್ನು ನ್ಯಾಯಪೀಠವು ನೆನಪಿಸಿಕೊಟ್ಟಿದೆ. ವ್ಯಕ್ತಿಗೆ ಅನ್ಯಾಯವಾಗಿ ಶಿಕ್ಷೆ ಆಗದಂತೆ ಈ ತತ್ತ್ವವು ಖಾತರಿಪಡಿಸುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.