ನವದೆಹಲಿ: ದೆಹಲಿ– ಎನ್‌ಸಿಆರ್ ಪ್ರದೇಶದ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿನ ಕೃಷಿ ತ್ಯಾಜ್ಯ ಸುಡುವುದನ್ನು ತಡೆಗಟ್ಟಲು ಹಾಗೂ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಧ್ಯಯನ ನಡೆಸಲು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ಏಕ ಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿದೆ.
ಏಕ ಸದಸ್ಯ ಸಮಿತಿಗೆ ಸಹಾಯ ಮಾಡಲು ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಭಾರತ್ ಸ್ಕೌಟ್ಸ್‌ಗಳನ್ನು ನಿಯೋಜಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ನ್ಯಾಯಪೀಠ ಸೂಚಿಸಿತು. ಈ ವೇಳೆ ಸಮಿತಿಯ ನೇಮಕಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಆಕ್ಷೇಪಣೆಯನ್ನು ಪೀಠ ತಿರಸ್ಕರಿಸಿತು.
ರಾಜ್ಯಗಳ ಯಾವ್ಯಾವ ಭಾಗಗಳಲ್ಲಿ ಕೃಷಿ ತ್ಯಾಜ್ಯ ಸುಡಲಾಗುತ್ತದೆ ಎಂಬ ಮಾಹಿತಿ ಸೇರಿದಂತೆ ವಿವಿಧ ಹಂತಗಳಲ್ಲಿ ಲೋಕೂರ್ ಸಮಿತಿಗೆ ನೀಡಿ ನೆರವಾಗಬೇಕು ಎಂದು ಸುಪ್ರೀಂಕೋರ್ಟ್ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ), ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು.
ಲೋಕೂರ್ ನೇತೃತ್ವದ ಸಮಿತಿ ಹದಿನೈದು ದಿನಗಳ ಕಾಲ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ ಎಂದು ಪೀಠ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.