ನವದೆಹಲಿ:ರೌಡಿ ಶೀಟರ್ ವಿಕಾಸ್ ದುಬೆ ಮತ್ತು ಆತನ ಸಹಚರರ ಎನ್‌ಕೌಂಟರ್ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್‌ನೇತೃತ್ವದ ತನಿಖಾ ಆಯೋಗವನ್ನು ರಚಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎಸ್. ಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠವು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಮಾಜಿ ಡಿಜಿಪಿ ಕೆ.ಎಲ್ ಗುಪ್ತಾ ಮತ್ತು ನಿವೃತ್ತ ನ್ಯಾಯಮೂರ್ತಿ ಶಶಿಕಾಂತ್ ಅಗರ್‌ವಾಲ್ ಅವರು ಸಮಿತಿಯಲ್ಲಿ ಇದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ರಾಜಕಾರಣಿಗಳು ಮತ್ತು ಪೊಲೀಸರೊಂದಿಗೆ ದುಬೆಗೆ ಇದ್ದ ಸಂಬಂಧಗಳ ಕುರಿತು ಈ ಸಮಿತಿ ತನಿಖೆ ನಡೆಸಲಿದೆ.ಸಮಿತಿಯು ಸಿಬಿಐ ಮತ್ತು ಎನ್ಐಎಯ ಸಹಾಯವನ್ನು ಪಡೆಯಬಹುದು ಎಂದು ಮೆಹ್ತಾ ಹೇಳಿದ್ದಾರೆ.
ರಾಜ್ಯ ಸರ್ಕಾರ ಸಮಿತಿಗೆ ಎಲ್ಲಾ ಬಗೆಯ ನೆರವು ಒದಗಿಸಬೇಕು. ಸಮಿತಿಯು ಕಾನ್ಪುರದಲ್ಲೇ ಇದ್ದು, ಎರಡು ತಿಂಗಳೊಳಗೆ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಒಂದು ವಾರದೊಳಗೆ ಸಮಿತಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಲಿದೆ.
ವಕೀಲರಾದ ಘನಶ್ಯಾಮ್ ಉಪಾಧ್ಯಾಯ ಮತ್ತು ಅನೂಪ್ ಪ್ರಕಾಶ್ ಅವಸ್ಥಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಈ ಕ್ರಿಮಿನಲ್ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರಬೇಕು ಎಂದು ಕೋರಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಮಾಧ್ಯಮದಲ್ಲಿ ಈ ಪ್ರಕರಣ ಹೆಚ್ಚು ಪ್ರಚಾರ ಪಡೆದಿದೆ ಎಂಬ ಒಂದೇ ಕಾರಣಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
ದುಬೆ ಎನ್‌ಕೌಂಟರ್ ಪ್ರಕರಣದ ತನಿಖಾ ಸಮಿತಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಡಿಜಿಪಿಯೊಬ್ಬರನ್ನು ನೇಮಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕಳೆದ ಸೋಮವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.