ADVERTISEMENT

ಶಿಕ್ಷಕನ ಅಮಾನತು: ಪರಿಶೀಲನೆ ನಡೆಸಲು ಅಟಾರ್ನಿ ಜನರಲ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಜಮ್ಮು–ಕಾಶ್ಮೀರ: 370ನೇ ವಿಧಿಯಡಿ ನೀಡಿದ್ದ ಸ್ಥಾನಮಾನ ರದ್ದು ಪ್ರಶ್ನಿಸಿ ವಾದ ಮಂಡನೆ

ಪಿಟಿಐ
Published 28 ಆಗಸ್ಟ್ 2023, 16:22 IST
Last Updated 28 ಆಗಸ್ಟ್ 2023, 16:22 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ : ಜಮ್ಮು–ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ, ವಾದ ಮಂಡಿಸಿದ್ದ ಅದೇ ರಾಜ್ಯದ ಶಿಕ್ಷಕರೊಬ್ಬರನ್ನು ಉದ್ಯೋಗದಿಂದ ಅಮಾನತುಗೊಳಿಸಿರುವ ಕ್ರಮವನ್ನು ಪರಿಶೀಲಿಸಬೇಕು ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ. 

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠವು, ವೈಯಕ್ತಿಕ ಅರ್ಜಿದಾರರಾಗಿ ಸುಪ್ರೀಂ ಕೋರ್ಟ್ ಮುಂದೆ ಇದೇ 24ರಂದು ವಾದ ಮಂಡಿಸಿದ್ದ ಶಿಕ್ಷಕ ಜಹೂರ್ ಅಹ್ಮದ್ ಭಟ್ ಅವರ ಅಮಾನತು ಕ್ರಮವನ್ನು ಗಮನಿಸಿ ಈ ಸೂಚನೆ ನೀಡಿದೆ.

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಗುಂಪು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು, ವಿಚಾರಣೆಗೆ ಅಹ್ಮದ್ ಭಟ್ ಅವರು ಖುದ್ದಾಗಿ ಹಾಜರಾಗಿದ್ದರು.  

ADVERTISEMENT

‘ಅಹ್ಮದ್ ಭಟ್ ಅವರು ಜಮ್ಮು–ಕಾಶ್ಮೀರದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದು, ಎರಡು ದಿನ ರಜೆ ಪಡೆದು, ಕೋರ್ಟ್‌ಗೆ ಹಾಜರಾಗಿ ತಮ್ಮ ವಾದ ಮಂಡಿಸಿದ್ದರು. ಅವರು ವಾಪಸ್ ಹಿಂತಿರುಗಿದ ಬಳಿಕ ಅವರನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ’ ಎಂದು ಭಟ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ರಾಜೀವ್ ಧವನ್ ಅವರು ನ್ಯಾಯಪೀಠದ ಗಮನಕ್ಕೆ ತಂದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಮಾತನಾಡಿ, ಸಮಸ್ಯೆಯನ್ನು ಪರಿಶೀಲಿಸುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.  

ನ್ಯಾಯಪೀಠಕ್ಕೆ ಪ್ರತಿಕ್ರಿಯಿಸಿದ ಆರ್. ವೆಂಕಟರಮಣಿ ಅವರು, ಈ ಪ್ರಕರಣವನ್ನು ಪರಿಶೀಲಿಸುವುದಾಗಿ ತಿಳಿಸಿದರು. 

‘ಭಟ್ ಅವರನ್ನು ಅಮಾನತುಗೊಳಿಸಿರುವುದನ್ನು ದಿನಪತ್ರಿಕೆಯಲ್ಲಿ ನೋಡಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಈ ವೇಳೆ ಭಟ್ ಅವರ ಅಮಾನತಿನ ಹಿಂದೆ ಹಲವು ಕಾರಣಗಳಿರುವುದು ತಿಳಿದುಬಂದಿದೆ. ಭಟ್ ನಿರಂತರವಾಗಿ ವಿವಿಧ ನ್ಯಾಯಾಲಯಗಳಿಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಪಿಲ್ ಸಿಬಲ್ ಅವರು, ‘ಹಾಗಿದ್ದರೆ ಭಟ್ ಅವರನ್ನು ಈ ಹಿಂದೆಯೇ ಅಮಾನತುಗೊಳಿಸಬಹುದಿತ್ತು. ಈಗೇಕೆ ಮಾಡಿದರು? ನನ್ನ ಬಳಿ ಭಟ್ ಅವರ ಅಮಾನತು ಆದೇಶದ ಪ್ರತಿ ಇದೆ. ಅವರು ಈ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ. ಹಾಗಾಗಿ, ಅವರನ್ನು ಅಮಾನತುಗೊಳಿಸಲಾಗಿದೆ. ಇದು ನ್ಯಾಯಸಮ್ಮತವಲ್ಲ’ ಎಂದರು.

‘ಅರ್ಜಿದಾರರ ವಿರುದ್ಧ ಇತರ ಕಾರಣಗಳಿದ್ದರೆ ಸರಿ. ಆದರೆ, ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ ಎಂಬ ಕಾರಣಕ್ಕಾಗಿ ಅಮಾನತುಗೊಳಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ‘ಈ ಬಗ್ಗೆ ಪರಿಶೀಲಿಸುವುದಾಗಿ’ ಮೆಹ್ತಾ ಅವರು ತಿಳಿಸಿದರು. 

ಅಹ್ಮದ್ ಭಟ್ ಅವರು ಶ್ರೀನಗರದ ಜವಾಹರ್ ನಗರದಲ್ಲಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜಶಾಸ್ತ್ರ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಅಮಾನತುಗೊಳಿಸಿದ ಬಳಿಕ ಅವರ ಬಗ್ಗೆ ತನಿಖೆ ಮಾಡಲು ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.