ನವದೆಹಲಿ: ಕೊಳಗೇರಿ ಪುನರ್ ಅಭಿವೃದ್ಧಿಗೆ ಸಂಬಂಧಿಸಿದಂತೆ 1,600 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಬಡವರ ಕಲ್ಯಾಣ ಮರೀಚಿಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, 1971ರ ಮಹಾರಾಷ್ಟ್ರ ಕಾನೂನು ಕುರಿತು ಕಾರ್ಯಕ್ಷಮತೆ ಲೆಕ್ಕಪರಿಶೋಧನೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಬುಧವಾರ ನಿರ್ದೇಶನ ನೀಡಿದೆ.
ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಲು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಯೋಜನೆ ಅನುಷ್ಠಾನಕ್ಕೆ ತೊಡಕಾಗಿರುವ 1971ರ ಮಹಾರಾಷ್ಟ್ರ ಕೊಳಗೇರಿ (ಅಭಿವೃದ್ಧಿ, ನಿರ್ಮೂಲನೆ ಹಾಗೂ ಪುನರ್‌ನಿರ್ಮಾಣ) ಕಾಯ್ದೆಯಲ್ಲಿನ ಲೋಪಗಳನ್ನು ಪತ್ತೆ ಮಾಡುವಂತೆ ಹೇಳಿದೆ.
‘ಯಾವುದೇ ಕಾನೂನುಗಳು ಜಾರಿಗೊಂಡಲ್ಲಿ ಅದರ ಸಮರ್ಪಕ ಅನುಷ್ಠಾನದ ಮೂಲಕ ಉದ್ದೇಶ ಈಡೇರುವಂತೆ ಮಾಡುವುದು, ಅನುಷ್ಠಾನ ಹಂತದಲ್ಲಿ ಸರಿಯಾಗಿ ಜಾರಿಯಾಗಿದೆಯೇ ಎಂದು ಪರಿಶೀಲಿಸುವುದು ಹಾಗೂ ಅದರ ಪರಿಣಾಮವನ್ನು ಅವಲೋಕಿಸುವುದು ಕಾರ್ಯಾಂಗದ ಕರ್ತವ್ಯವಾಗಿದೆ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಅರವಿಂದ ಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಮುಂಬೈನ ಬೋರಿವಲಿ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ 2003ರಲ್ಲಿ ರಿಯಲ್ ಎಸ್ಟೇಟ್ ಕಂಪನಿ ಯಶ್ ಡೆವಲಪರ್ಸ್‌ಗೆ ನೀಡಿದ್ದ ಗುತ್ತಿಗೆಯನ್ನು ರದ್ದಪಡಿಸಿದ್ದನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಕುರಿತು ಯಶ್ ಡೆವಲಪರ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.