ADVERTISEMENT

ಮಹಿಳೆಯರಿಗೆ ಮುಟ್ಟಿನ ರಜೆಗೆ ಮಾದರಿ ನೀತಿ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್

ಪಿಟಿಐ
Published 8 ಜುಲೈ 2024, 9:53 IST
Last Updated 8 ಜುಲೈ 2024, 9:53 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ರಾಜ್ಯಗಳು ಮತ್ತು ಇತರೆ ಸಂಬಂಧಿತ ಮಧ್ಯಸ್ಥಿಕೆಗಾರರ ಜೊತೆ ಸಮಾಲೋಚನೆ ನಡೆಸಿ ಮಹಿಳಾ ಉದ್ಯೋಗಿಗಳ ಮುಟ್ಟಿನ ರಜೆ ಕುರಿತು ಮಾದರಿ ನೀತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಕಡ್ಡಾಯ ರಜೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ನ್ಯಾಯಾಲಯಗಳು ಪರಿಶೀಲನೆ ನಡೆಸುವುದಲ್ಲ ಎಂದು ಹೇಳಿದೆ. ಆ ರೀತಿಯ ಕಡ್ಡಾಯ ರಜೆ ನೀಡುವಂತೆ ನ್ಯಾಯಾಲಯದಿಂದ ಆದೇಶ ನೀಡುವುದು ವ್ಯತಿರಿಕ್ತ ಮತ್ತು ಹಾನಿಕಾರಕ ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೇ ಇರಬಹುದು ಎಂದು ಹೇಳಿದೆ.

ಈ ರೀತಿಯ ರಜೆಗೆ ಆದೇಶ ನೀಡುವುದರಿಂದ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೇಗೆ ಪ್ರೋತ್ಸಾಹಿಸುತ್ತದೆ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಾಲಯ, ಮುಟ್ಟಿನ ರಜೆ ಕಡ್ಡಾಯ ಮಾಡುವುದರಿಂದ ಉದ್ಯೋಗದಾತರು ಮಹಿಳಾ ಉದ್ಯೋಗಿಗಳನ್ನು ದೂರ ಇಡಬಹುದು. ಅದು ನಮಗೆ ಬೇಕಿಲ್ಲ’ ಎಂದು ಪೀಠ ಹೇಳಿದೆ.

ADVERTISEMENT

‘ಇದು ವಾಸ್ತವವಾಗಿ ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ. ನ್ಯಾಯಾಲಯಗಳು ಪರಿಗಣಿಸುವಂತದ್ದಲ್ಲ’ಎಂದು ಪೀಠ ಹೇಳಿದೆ.

‘ಅರ್ಜಿದಾರರಿಗೆ ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡುತ್ತದೆ. ನೀತಿ ಹಂತದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕಾರ್ಯದರ್ಶಿಗೆ ನಾವು ಮನವಿ ಮಾಡುತ್ತದೆ. ಜೊತೆಗೆ, ಸಂಬಂಧಪಟ್ಟವರ ಜೊತೆ ಚರ್ಚಿಸಿ ನೀತಿ ರೂಪಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸುತ್ತದೆ’ ಎಂದು ನ್ಯಾಯಾಲಯ ಹೇಳಿದೆ.

ದೇಶದಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು, ದೇಶದಾದ್ಯಂತ, ಮುಟ್ಟಿನ ಅವಧಿಯಲ್ಲಿ ತಮ್ಮ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ತಿಂಗಳ ರಜೆ ನೀಡಲು ಅನುಮತಿಸುವಂತೆ ನ್ಯಾಯಾಲಯದ ನಿರ್ದೇಶನ ಕೋರಿದ್ದಾರೆ.  

1992ರಿಂದ ಮಹಿಳೆಯರಿಗೆ ಎರಡು ದಿನಗಳ ವಿಶೇಷ ಮುಟ್ಟಿನ ರಜೆ ನೀಡುತ್ತಿರುವ ದೇಶದ ಏಕೈಕ ರಾಜ್ಯ ಬಿಹಾರವಾಗಿದೆ. 1912ರಲ್ಲಿ, ರಾಜಪ್ರಭುತ್ವದ ಕೊಚ್ಚಿನ್‌ನ (ಈಗಿನ ಎರ್ನಾಕುಳಂ ಜಿಲ್ಲೆ) ತ್ರಿಪುನಿಥುರಾದ ಬಾಲಕಿಯರ ಸರ್ಕಾರಿ ಶಾಲೆಯು ವಿದ್ಯಾರ್ಥಿಗಳಿಗೆ ತಮ್ಮ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮುಟ್ಟಾದರೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಿ, ನಂತರ ಪರೀಕ್ಷೆ ಬರೆಯಲು ಅನುಮತಿಸಿತ್ತು ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.  

ದೇಶದಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ಸೌಲಭ್ಯ ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.