ADVERTISEMENT

ಸಮುದಾಯ ಅಡುಗೆಮನೆ: ಮಾದರಿ ಯೋಜನೆ ರೂಪಿಸಿ-ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:23 IST
Last Updated 18 ಜನವರಿ 2022, 15:23 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ರಾಜ್ಯಗಳ ಎಲ್ಲೆಡೆ ಸಮುದಾಯ ಅಡುಗೆಮನೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಮಾದರಿ ಯೋಜನೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಮಂಗಳವಾರ ಸೂಚಿಸಿತು.

ಅರ್ಜಿಯೊಂದರ ವಿಚಾರಣೆ ವೇಳೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿತು.

ಸಮುದಾಯ ಅಡುಗೆಮನೆಗಳ ಸ್ಥಾಪನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾದರಿ ಯೋಜನೆ ರೂಪಿಸಬೇಕು. ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಬೇಕು ಎಂದೂ ಹೇಳಿತು.

ADVERTISEMENT

‘ಅಪೌಷ್ಟಿಕತೆ, ಹಸಿವಿನ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಸಿದ್ಧಸೂತ್ರ ಇಲ್ಲ. ಹೀಗಾಗಿ ಸಮುದಾಯ ಅಡುಗೆಮನೆಗಳ ಸ್ಥಾಪನೆಗೆ ಸಂಬಂಧಿಸಿ ಸಾರ್ವತ್ರಿಕ ಯೋಜನೆಯನ್ನೇ ರೂಪಿಸಬೇಕು ಎಂಬುದು ನ್ಯಾಯಾಲಯದ ಅಭಿಮತವಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

‘ರಾಜ್ಯಗಳಿಗೆ ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ಪೂರೈಸಲು ಸಾಧ್ಯವೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಲಿ. ಆಹಾರ ಧಾನ್ಯಗಳ ಸಾಗಣೆಯ ಜವಾಬ್ಧಾರಿಯನ್ನು ರಾಜ್ಯ ಸರ್ಕಾರಗಳೇ ವಹಿಸಕೊಳ್ಳಬೇಕು’ ಎಂದೂ ಹೇಳಿತು.

‘ಸ್ಥಳೀಯ ಆಹಾರ ಪದ್ಧತಿಗೆ ಅನುಗುಣವಾಗಿ ರಾಜ್ಯಗಳು ಈ ‘ಮಾದರಿ ಯೋಜನೆ’ಯನ್ನು ಬದಲಾಯಿಸಿಕೊಳ್ಳಬಹುದು’ ಎಂದು ಹೇಳಿದ ನ್ಯಾಯಪೀಠ, ಕರ್ನಾಟಕದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಉಲ್ಲೇಖಿಸಿತು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ಅವರು, ‘ಕೇಂದ್ರ ಸರ್ಕಾರ ಈಗಾಗಲೇ 131 ಯೋಜನೆಗಳಿಗೆ ಅನುದಾನ ನೀಡುತ್ತಿದೆ. ಹೀಗಾಗಿ, ದೇಶದಾದ್ಯಂತ ಸಮುದಾಯ ಅಡುಗೆಮನೆಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಹಣಕಾಸಿನ ಕೊರತೆಯಾಗಲಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೆಡೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಕ್ಯಾಂಟೀನ್‌ಗಳನ್ನು ಸ್ಥಾಪಿಸಬೇಕು ಎಂದು ಕೋರಿ ಅರುಣ್‌ ಧವನ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ಪರ ವಕೀಲೆ ಅಸೀಮಾ ಮಾಂಡ್ಲಾ, ‘ದೇಶದಾದ್ಯಂತ ಸಮುದಾಯ ಅಡುಗೆಮನೆಗಳ ಸ್ಥಾಪಿಸುವ ಯೋಜನೆ ರೂಪಿಸಲು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ಹಸಿನಿಂದ ಸಾವು ಸಂಭವಿಸಿಲ್ಲ’

ಅರ್ಜಿ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ಅವರು, ‘ಹಸಿವಿನಿಂದಾಗಿ ಸಾವುಗಳು ಸಂಭವಿಸಿದ ಬಗ್ಗೆ ರಾಜ್ಯಗಳು ವರದಿ ಮಾಡಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ತಮಿಳುನಾಡಿನಲ್ಲಿ 5 ವರ್ಷದ ಮಗು ಹಸಿವಿನಿಂದ ಬಳಲಿ ಮೃತಪಟ್ಟಿದೆ ಎಂಬ ಮಾಧ್ಯಮಗಳ ವರದಿಯನ್ನು ಅವರು ಪ್ರಸ್ತಾಪಿಸಿದರು. ‘ಮಗು ಆಹಾರ ಸೇವಿಸಿದ್ದರ ಕುರಿತು ಯಾವುದೇ ಕುರುಹು ಮರಣೋತ್ತರ ಪರೀಕ್ಷೆ ವೇಳೆ ಪತ್ತೆಯಾಗಿರಲಿಲ್ಲ ಎಂಬುದಾಗಿ ವರದಿಯಾಗಿತ್ತು’ ಎಂದೂ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದೇಶದಲ್ಲಿ ಹಸಿನಿಂದಾಗಿ ಸಾವುಗಳು ಸಂಭವಿಸಿಲ್ಲ ಎಂಬುದನ್ನು ನಂಬಬಹುದೇ’ ಎಂದು ಅಚ್ಚರಿ ವ್ಯಕ್ತಪಡಿಸಿತು.

‘ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಲೇಬೇಕಾಗಿದೆ’ ಎಂದ ನ್ಯಾಯಪೀಠ, ‘ಚುನಾವಣೆಗಳ ಸಂದರ್ಭದಲ್ಲಿ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡುವ ರಾಜಕೀಯ ಪಕ್ಷಗಳು ಅಪೌಷ್ಟಿಕತೆ ನಿವಾರಣೆಗೆ ಏನೂ ಮಾಡುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿತು.

ಅಪೌಷ್ಟಿಕತೆ ಹಾಗೂ ದೇಶದಲ್ಲಿ ಹಸಿವಿನಿಂದಾಗಿ ಸಂಭವಿಸಿದ ಸಾವುಗಳ ಕುರಿತು ಎಲ್ಲ ರಾಜ್ಯಗಳು ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಪೀಠ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.