ADVERTISEMENT

ಸ್ವಾತಿ ಮಾಲಿವಾಲ್‌ ಮೇಲೆ ಹಲ್ಲೆ: ಬಿಭವ್‌ಕುಮಾರ್‌ಗೆ ಸುಪ್ರೀಂ ಕೋರ್ಟ್‌ ಛೀಮಾರಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:59 IST
Last Updated 1 ಆಗಸ್ಟ್ 2024, 15:59 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ಆರೋಪಿಯಾಗಿರುವ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್‌ ಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಛೀಮಾರಿ ಹಾಕಿದೆ.

ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದು ಆಘಾತಕಾರಿ ಎಂದೂ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ, ದೀಪಂಕರ್‌ ದತ್ತಾ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ನ್ಯಾಯಪೀಠ, ‘ಈ ಘಟನೆ ಕುರಿತಂತೆ ಬಿಭವ್‌ ಕುಮಾರ್‌ ಅವರಿಗೆ ನಾಚಿಕೆಯಾದಂತಿಲ್ಲ ಮತ್ತು ಅಧಿಕಾರ ಅವರ ನೆತ್ತಿಗೇರಿದಂತೆ ಕಾಣುತ್ತದೆ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

ಜಾಮೀನು ಕೋರಿ ಬಿಭವ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಮುಖ್ಯಮಂತ್ರಿಗಳ ನಿವಾಸ ಖಾಸಗಿ ಬಂಗಲೆಯೇ? ಇಂತಹ ಗೂಂಡಾ ಪ್ರವೃತ್ತಿಯ ವ್ಯಕ್ತಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡಬಹುದೇ’ ಎಂದು ಬಿಭವ್‌ಕುಮಾರ್‌ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರನ್ನು ಪೀಠ ಪ್ರಶ್ನಿಸಿತು.

ಆಗ, ‘ಇದು ಕೊಲೆ ಪ್ರಕರಣವಲ್ಲ. ದೂರುದಾರರಿಗೆ ಸಣ್ಣ ಗಾಯಗಳಾಗಿವೆ. ವಿಚಾರಣಾ ನ್ಯಾಯಾಲಯವೇ ಅರ್ಜಿದಾರಗೆ ಜಾಮೀನು ನೀಡಬಹುದಿತ್ತು’ ಎಂದು ಸಿಂಘ್ವಿ ಪೀಠಕ್ಕೆ ತಿಳಿಸಿದರು.

‘ಎಫ್‌ಐಆರ್‌ ದಾಖಲಿಸುವಲ್ಲಿ ಕೂಡ ವಿಳಂಬವಾಗಿದೆ. ಮೇ 13ರಂದು ಘಟನೆ ನಡೆದಿದ್ದರೂ, ಮೇ 16ರಂದು ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದರು. 

‘ಎಫ್‌ಐಆರ್ ದಾಖಲಿಸಿದ ಸನ್ನಿವೇಶವೂ ವಿಚಿತ್ರವಾಗಿದೆ. ಸ್ವಾತಿ ಮಾಲಿವಾಲ್‌ ಅವರು ಘಟನೆ ನಡೆದ ದಿನವೇ ಪೊಲೀಸ್‌ ಠಾಣೆಗೆ ಹೋಗಿದ್ದರೂ ಎಫ್‌ಐಆರ್‌ ದಾಖಲಿಸಲಿಲ್ಲ. ಮೂರು ದಿನಗಳ ನಂತರ ದಾಖಲಿಸಿದ್ದಾರೆ’ ಎಂದು ಸಿಂಘ್ವಿ ಹೇಳಿದರು.

‘ಇದು, ದೊಡ್ಡ ಅಥವಾ ಸಣ್ಣ ಗಾಯಗಳಿಗೆ ಸಂಬಂಧಿಸಿದ್ದಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಎಫ್‌ಐಆರ್‌ನಲ್ಲಿ ವಿವರಗಳನ್ನು ಉಲ್ಲೇಖಿಸಿದ ಪೀಠ, ‘ಅರ್ಜಿದಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಲ್ಲ. ಘಟನೆ ನಡೆದ ದಿನ ಆತ ಸರ್ಕಾರಿ ನೌಕರನೇ ಆಗಿದ್ದ. ಅಧಿಕಾರದ ಮದ ನೆತ್ತಿಗೇರಿತ್ತು ಎಂದು ಅವರು ಭಾವಿಸಿದ್ದರೇ’ ಎಂದು ಪ್ರಶ್ನಿಸಿತು.

‘ಈ ಎಲ್ಲ ವಿವರಗಳನ್ನು ಪರಿಶೀಲಿಸಲು ಇದು ಕೊಲೆ ಪ್ರಕರಣ ಅಲ್ಲ. ಇದು ವಿಚಾರಣಾ ನ್ಯಾಯಾಲಯದ ಕೆಲಸ. ಎಫ್‌ಐಆರ್‌ನಲ್ಲಿರುವುದೇ ಅಂತಿಮ ಸತ್ಯ ಎಂಬಂತೆ ನ್ಯಾಯಾಲಯ ಹೇಳುತ್ತಿದೆ’ ಎಂದು ಸಿಂಘ್ವಿ ಪ್ರತಿಕ್ರಿಯಿಸಿದರು.

ಇದಕ್ಕೆ ಪ್ತತಿಕ್ರಿಯಿಸಿದ ಪೀಠ,‘ನಿಮ್ಮ ಆಂತರಿಕ ವಿಚಾರ ಮತ್ತು ಇತರ ರಾಜಕೀಯ ನಮಗೆ ಬೇಕಿಲ್ಲ. ಅಪರಾಧಕ್ಕೆ ಸಂಬಂಧಿಸಿದ ನ್ಯಾಯಪ್ರಕ್ರಿಯೆ ಮತ್ತು ಎಫ್‌ಐಆರ್‌ನಲ್ಲಿನ ಮಾಹಿತಿ ಆಧಾರದಲ್ಲಿ ಮಾತನಾಡುತ್ತೇವೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಆರೋಪಪಟ್ಟಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅರ್ಜಿದಾರನಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಜಾಮೀನು ಅರ್ಜಿಗೆ ಪ್ರತಿಕ್ರಿಯಿಸುವಂತೆ ದೆಹಲಿ ಪೊಲೀಸರಿಗೂ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.