ADVERTISEMENT

ಯೋಧರ ವಿರುದ್ಧದ ತನಿಖಾ ಪ್ರಕ್ರಿಯೆ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 17 ಸೆಪ್ಟೆಂಬರ್ 2024, 20:08 IST
Last Updated 17 ಸೆಪ್ಟೆಂಬರ್ 2024, 20:08 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ 13 ನಾಗರಿಕರನ್ನು ಹತ್ಯೆಗೈದ ಆರೋಪದಲ್ಲಿ ಸೇನೆಯ 30 ಸಿಬ್ಬಂದಿ ವಿರುದ್ಧ ನಾಗಾಲ್ಯಾಂಡ್‌ ಸರ್ಕಾರ ಆರಂಭಿಸಿದ್ದ ಅಪರಾಧ ತನಿಖಾ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಮುಕ್ತಾಯಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಯಾಗಿದ್ದ ಅಧಿಕಾರಿಯೊಬ್ಬರ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ.ಬಿ.ವರಾಳೆ ಅವರಿದ್ದ ಪೀಠ ಪುರಸ್ಕರಿಸಿತು.  

1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯ (ಎಎಫ್‌ಎಸ್‌ಪಿಎ) ಸೆಕ್ಷನ್ 6ರ ಅಡಿಯಲ್ಲಿ ಸಿಬ್ಬಂದಿಯ ವಿಚಾರಣೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಕಳೆದ ವರ್ಷ ಫೆಬ್ರುವರಿ 28ರಂದು ನಿರಾಕರಿಸಿದೆ ಎಂದು ಪೀಠವು ಹೇಳಿತು.

ADVERTISEMENT

ಆದರೆ ಸೇನಾ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದೊಂದು ದಿನ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ಈಗ ದಾಖಲಾಗಿರುವ ಎಫ್ಐಆರ್‌ಗಳಿಗೆ ಅನುಗುಣವಾಗಿ ಅಪರಾಧ ತನಿಖಾ ಪ್ರಕ್ರಿಯೆ ಮುಂದುವರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು.

2021ರ ಡಿಸೆಂಬರ್‌ನಲ್ಲಿ ಪೂರ್ವ ನಾಗಾಲ್ಯಾಂಡ್‌ನ ಒಟಿಂಗ್ ಗ್ರಾಮದಲ್ಲಿ ಗಣಿ ಕಾರ್ಮಿಕರಿದ್ದ ಪಿಕ್‌ಅಪ್ ಟ್ರಕ್‌ ಗುರಿಯಾಗಿಸಿ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದರು. ಉಗ್ರರು ಎಂದು ಭಾವಿಸಿ ಸೇನೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದರು. ಈ ಘಟನೆ ಖಂಡಿಸಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆಯು ಗುಂಡು ಹಾರಿಸಿದಾಗ ಮತ್ತೆ ಏಳು ಮಂದಿ ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.