ADVERTISEMENT

ಕಲ್ಕತ್ತ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳ ಅಧಿಕಾರಾವಧಿ ವಿಸ್ತರಣೆ; ಶಿಫಾರಸು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:20 IST
Last Updated 25 ಜುಲೈ 2024, 14:20 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಕಲ್ಕತ್ತ ಹೈಕೋರ್ಟ್‌ನ 9 ಹೆಚ್ಚುವರಿ ನ್ಯಾಯಮೂರ್ತಿಗಳ ಅಧಿಕಾರ ಅವಧಿಯನ್ನು ಆಗಸ್ಟ್‌ 31ರಿಂದ ಅನ್ವಯವಾಗುವಂತೆ ಒಂದು ವರ್ಷ ವಿಸ್ತರಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ.

ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವುದಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಅನುಮೋದನೆಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿರಲಿಲ್ಲ ಎಂಬುದು ಸೇರಿದಂತೆ ಇತರ ಸಂಗತಿಗಳನ್ನು ಪರಿಗಣಿಸಿ ಕೊಲಿಜಿಯಂ ಈ ಶಿಫಾರಸು ಮಾಡಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಬಿ.ಆರ್‌.ಗವಾಯಿ ಅವರನ್ನು ಒಳಗೊಂಡ ಕೊಲಿಜಿಯಂ, ಬುಧವಾರ ಈ ಕುರಿತು ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ADVERTISEMENT

9 ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವಂತೆ ಹೈಕೋರ್ಟ್‌ನ ಕೊಲಿಜಿಯಂ  ಏಪ್ರಿಲ್‌ 29ರಂದು ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸು ಕುರಿತು ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿರಲಿಲ್ಲ.

ಈ ವಿಚಾರಕ್ಕೆ ಸಂಬಂಧಿಸಿ, ಕಲ್ಕತ್ತ ಹೈಕೋರ್ಟ್‌ ವಿದ್ಯಮಾನಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಇತರ ನ್ಯಾಯಮೂರ್ತಿಗಳೊಂದಿಗೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸಮಾಲೋಚನೆ ನಡೆಸಿತ್ತಲ್ಲದೇ, ತನ್ನ ಮುಂದೆ ಮಂಡಿಸಿದ್ದ ದಾಖಲೆಗಳ ಪರಿಶೀಲನೆಯನ್ನೂ ನಡೆಸಿತ್ತು.

9 ಹೆಚ್ಚುವರಿ ನ್ಯಾಯಮೂರ್ತಿಗಳು ನೀಡಿದ್ದ ತೀರ್ಪುಗಳನ್ನು ಪರಿಶೀಲಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ಕಮಿಟಿಯನ್ನು ಮುಖ್ಯನ್ಯಾಯಮೂರ್ತಿ ರಚಿಸಿದ್ದರು. ನಂತರ, ಕೊಲಿಜಿಯಂ ಈ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.