ನವದೆಹಲಿ: ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಹಿರಿಯ ವಕೀಲ ಸೌರಭ್ ಕೃಪಾಲ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸುವ ಸಂಬಂಧ ತಾನು 2021ರ ನವೆಂಬರ್ 11ರಂದು ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರವು, ‘ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸದೇ ಇದ್ದರೂ, ಸಲಿಂಗಿಗಳ ವಿವಾಹಕ್ಕೆ ಇನ್ನೂ ಮನ್ನಣೆಯಿಲ್ಲ’ ಎಂದು ಹೇಳುವ ಮೂಲಕ ಕೊಲಿಜಿಯಂನ ಈ ಹಿಂದಿನ ಶಿಫಾರಸನ್ನು ತಿರಸ್ಕರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಕೊಲಿಜಿಯಂ, ಕೃಪಾಲ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವ ಪ್ರಸ್ತಾವ ಐದು ವರ್ಷಗಳಿಂದ ಬಾಕಿಯಿದ್ದು, ತ್ವರಿತವಾಗಿ ಪ್ರಕ್ರಿಯೆ ನಡೆಸಬೇಕಿದೆ ಎಂದು ತಿಳಿಸಿದೆ. ಈ ಕುರಿತ ತನ್ನ ಹೇಳಿಕೆಯನ್ನು ಕೊಲಿಜಿಯಂ ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಕೃಪಾಲ್ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಎನ್. ಕೃಪಾಲ್ ಅವರ ಮಗ. ದೆಹಲಿ ಹೈಕೋರ್ಟ್‌ನ ಕೊಲಿಜಿಯಂ 2017ರ ಅಕ್ಟೋಬರ್ 13ರಂದು ಕೃಪಾಲ್ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ಅದನ್ನು ಸುಪ್ರೀಂಕೋರ್ಟ್ ಕೊಲಿಜಿಯಂ 2021ರ ನವೆಂಬರ್ 11ರಂದು ಅನುಮೋದಿಸಿತ್ತು. ಈ ಸಂಬಂಧ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ 2022ರ ನವೆಂಬರ್ 25ರಂದು ಮರು ಪರಿಶೀಲಿಸುವಂತೆ ಹಿಂದಿರುಗಿಸಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕೃಪಾಲ್ ಅವರು ಲೈಂಗಿಕ ದೃಷ್ಟಿಕೋನದ ಬಗ್ಗೆ ಮುಕ್ತವಾಗಿರುವುದಕ್ಕೆ ಕೊಲಿಜಿಯಂ ಹೇಳಿಕೆಯಲ್ಲಿ ಶ್ಲಾಘಿಸಿದೆ.
ಸುಪ್ರೀಂಕೋರ್ಟ್ ಶಿಫಾರಸಿಗೆ ‘ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್’ (ಆರ್‌ಎಡಬ್ಲ್ಯು) 2019ರ ಏಪ್ರಿಲ್ 11 ಮತ್ತು 2021ರ 18ರಂದು ಆಕ್ಷೇಪಣೆ ಸಲ್ಲಿಸಿತ್ತು. ಕೃಪಾಲ್ ಅವರ ಸಂಗಾತಿ ಸ್ವಿಸ್ ಪ್ರಜೆಯಾಗಿದ್ದು, ಅವರಿಬ್ಬರು
ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂಬುದೇ ಅದರ ಆಕ್ಷೇಪಣೆಯಾಗಿತ್ತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಜಾನ್ ಹೆಸರೂ ಪುನರುಚ್ಚಾರ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಪೋಸ್ಟ್‌ಗಳನ್ನು ಹಾಕಿದ್ದ ವಕೀಲ ಆರ್. ಜಾನ್ ಸತ್ಯಂ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸುವ ಸಂಬಂಧ ತಾನು 2022ರ ಫೆಬ್ರುವರಿ 16ರಂದು ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದೆ.
ಜಾನ್ ಸತ್ಯಂ ಅವರಿಗೆ ಸಂಬಂಧಿಸಿದಂತೆ ಗುಪ್ತಚರ ಬ್ಯೂರೊ (ಐಬಿ) ಎತ್ತಿದ್ದ ಆಕ್ಷೇಪಣೆಗಳನ್ನು ಕೊಲಿಜಿಯಂ ಬದಿಗೊತ್ತಿದೆ. ಸತ್ಯಂ ಅವರು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಯೋಗ್ಯರಾಗಿದ್ದಾರೆ ಎಂದಿರುವ ಕೊಲಿಜಿಯಂ ತನ್ನ ನಿರ್ಣಯವನ್ನು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.