ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ನೋಟಿಸ್‌ಗೆ ಉತ್ತರಿಸಲು ವಿಫಲರಾದ ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇವರಿಬ್ಬರಿಗೂ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
ಕಂಪನಿಯ ಉತ್ಪನ್ನಗಳು ಹಾಗೂ ಅವುಗಳ ಫಲದಾಯಕತೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೋರ್ಟ್ ಇವರಿಗೆ ನೋಟಿಸ್ ಜಾರಿಗೊಳಿಸಿತ್ತು.
ಕೋರ್ಟ್‌ಗೆ ಕೊಟ್ಟ ಮಾತನ್ನು ಮೇಲ್ನೋಟಕ್ಕೆ ಉಲ್ಲಂಘಿಸಿರುವ ಕಾರಣಕ್ಕೆ ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಏಕೆ ಆರಂಭಿಸಬಾರದು ಎಂದು ಪ್ರಶ್ನಿಸಿ ನೀಡಿರುವ ನೋಟಿಸ್‌ಗೆ ಪತಂಜಲಿ ಆಯುರ್ವೇದ ಕಂಪನಿಯ ಸಹಸಂಸ್ಥಾಪಕ ರಾಮದೇವ ಮತ್ತು ಬಾಲಕೃಷ್ಣ ಅವರು ಉತ್ತರಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ಹೇಳಿತು.
ಮುಂದಿನ ವಿಚಾರಣೆ ಸಂದರ್ಭದಲ್ಲಿ ಇವರಿಬ್ಬರೂ ಖುದ್ದಾಗಿ ಹಾಜರಿರಬೇಕು ಎಂದು ಕೋರ್ಟ್ ಸೂಚಿಸಿದೆ. ಕಂಪನಿಯ ವಕೀಲರು ಕಳೆದ ವರ್ಷದ ನವೆಂಬರ್ 21ರಂದು ಕೋರ್ಟ್‌ಗೆ ‘ಇನ್ನು ಮುಂದೆ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ. ಅದರಲ್ಲೂ ಮುಖ್ಯವಾಗಿ ಕಂಪನಿ ತಯಾರಿಸಿದ ಉತ್ಪನ್ನಗಳ ಜಾಹೀರಾತು ಮತ್ತು ಬ್ರ್ಯಾಂಡಿಂಗ್ ವಿಚಾರವಾಗಿ ಕಾನೂನು ಉಲ್ಲಂಘಿಸುವುದಿಲ್ಲ. ಔಷಧೀಯ ಫಲದಾಯಕತೆ ಬಗ್ಗೆ ಅಥವಾ ಯಾವುದೇ ವೈದ್ಯ ಪದ್ಧತಿಗಳ ವಿರುದ್ಧವಾಗಿ ಬೀಸು ಹೇಳಿಕೆಗಳನ್ನು ಇನ್ನು ಮುಂದೆ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದರು.
ರಾಮದೇವ ಅವರು ಕೋವಿಡ್ ಲಸಿಕೆ ಅಭಿಯಾನದ ವಿರುದ್ಧ ಹಾಗೂ ಆಧುನಿಕ ವೈದ್ಯಪದ್ಧತಿಯ ವಿರುದ್ಧ ಅಪಮಾನಕಾರಿ ಪ್ರಚಾರಾಂದೋಲನವನ್ನು ನಡೆಸುತ್ತಿದ್ದಾರೆ ಎಂದು ದೂರಿ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
‘ಪತಂಜಲಿ’ ಮತ್ತು ಬಾಲಕೃಷ್ಣ ಅವರು ನೋಟಿಸ್‌ಗೆ ಉತ್ತರ ನೀಡದಿದ್ದುದು ಏಕೆ ಎಂದು ಕೋರ್ಟ್ ಮೊದಲು ಪ್ರಶ್ನಿಸಿತು. ಪತಂಜಲಿ ಹಾಗೂ ಬಾಲಕೃಷ್ಣ ಅವರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ತಮ್ಮ ಕಕ್ಷಿದಾರರ ಜೊತೆ ಈ ಬಗ್ಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
‘ಅದು ನಮಗೆ ಸಾಕಾಗುವುದಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವು. ಉತ್ತರ ಕೊಟ್ಟಿಲ್ಲ ಎಂದಾದರೆ ಪರಿಣಾಮಗಳು ಇರುತ್ತವೆ’ ಎಂದು ಪೀಠವು ರೋಹಟಗಿ ಅವರಿಗೆ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.