ನವದೆಹಲಿ: ಸಲಿಂಗರತಿಗೆ ಅಂಟಿಸಿದ ‘ಅಪರಾಧ’ ಹಣೆಪಟ್ಟಿ ತೆಗೆದು ಹಾಕಿ ಅದಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿದೆ.
ಸಲಿಂಗಕಾಮ ಅಪರಾಧ ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪರಾಮರ್ಶೆ ನಡೆಸಲು ಸಿದ್ಧ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಎ.ಎಂ. ಖಾನ್ವಿಲಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಈ ಪೀಠದಲ್ಲಿದ್ದಾರೆ.
ಸಲಿಂಗಕಾಮಕ್ಕೆ ಕಾನೂನು ಮಾನ್ಯತೆ ನೀಡಿ ದೆಹಲಿ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ 2013ರಲ್ಲಿ ವಜಾಗೊಳಿಸಿತ್ತು. ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 377ರ ಅನ್ವಯ ಸಲಿಂಗ ಸಂಬಂಧ ಅಪರಾಧ ಎಂದು ತೀರ್ಪು ನೀಡಿತ್ತು.
ಪರಾಮರ್ಶೆಗೆ ಸಿದ್ಧ
ಸಲಿಂಗಕಾಮ ಅಪಾರಾಧ ಎಂದು ಹೇಳುವ ಐಪಿಸಿ 377ನೇ ಸೆಕ್ಷನ್‌ನ ಸಾಂವಿಧಾನಿಕ ಮಾನ್ಯತೆ ಪರಿಶೀಲಿಸುವುದಾಗಿ ಸಂವಿಧಾನ ಪೀಠ ಹೇಳಿದೆ.
ಇದರೊಂದಿಗೆ ಎಲ್‌ಜಿಬಿಟಿಕ್ಯೂ ಸಮುದಾಯದ (ಸಲಿಂಗ ಕಾಮಿಗಳು, ಉಭಯ ಲಿಂಗರತಿಗಳು, ಲಿಂಗ ಪರಿವರ್ತಿತರು, ವಿಕೃತ ಸಲಿಂಗಕಾಮಿಗಳು) ಮೂಲಭೂತ ಹಕ್ಕುಗಳನ್ನು ಕೂಡ ಪರಾಮರ್ಶೆ ನಡೆಸಲು ಸಮ್ಮತಿ ಸೂಚಿಸಿದೆ.
ತೀರ್ಪು ಪರಾಮರ್ಶೆ ನಡೆಸುವಂತೆ ಕೋರಿ ಸ್ವಯಂಸೇವಾ ಸಂಸ್ಥೆ ನಾಜ್ ಪ್ರತಿಷ್ಠಾನ, ಸಲಿಂಗಕಾಮದ ಪ್ರತಿಪಾದಕರು ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಲೈಂಗಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು:
ಲೈಂಗಿಕ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ನೃತ್ಯ ಕಲಾವಿದ ನವತೇಜ್ ಜೌಹಾರ್ ಪರ ವಕೀಲ ಮಕುಲ್ ರೋಹಟಗಿ ವಾದ ಮಂಡಿಸಿದರು.
ಎಲ್‌ಜಿಬಿಟಿ ಸಮುದಾಯದ ಸಂವಿಧಾನದತ್ತವಾದ ಲೈಂಗಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಅವರು ಮನವಿ ಮಾಡಿದರು.
2017ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಒಂಬತ್ತು ಜನರ ಪೀಠ ನೀಡಿದ್ದ ಖಾಸಗಿತನ ಕೂಡ ಮೂಲಭೂತ ಹಕ್ಕು ಎಂಬ ತೀರ್ಪನ್ನು ಹಿನ್ನೆಲೆಯಾಗಿಟ್ಟುಕೊಂಡು ಲೈಂಗಿಕ ಸ್ವಾತಂತ್ರ್ಯ ಬೇಡಿಕೆಯನ್ನು ಪರಿಶೀಲಿಸಬೇಕು ಎಂದು ಅವರು ಕೋರಿದರು. ರೋಹಟಗಿ ಅವರ ಮನವಿಯನ್ನು ಸಂವಿಧಾನ ಪೀಠಪುರಸ್ಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.