ನವದೆಹಲಿ: ಸಾರ್ವಜನಿಕ ಸ್ಥಳಗಳಿಗೆ ಅಂಗವಿಕಲರು ಸುಲಭವಾಗಿ ಪ್ರವೇಶಿಸುವಂತಾಗಬೇಕು. ಈ ಉದ್ಧೇಶಕ್ಕಾಗಿ ರೂಪಿಸಿರುವ ‘ಕಡ್ಡಾಯ ಮಾನದಂಡ’ಗಳನ್ನು ಮೂರು ತಿಂಗಳ ಒಳಗಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಈ ಮಾನದಂಡಗಳನ್ನು ಜಾರಿಗೊಳಿಸುವಂತೆ 2017ರ ಡಿಸೆಂಬರ್ 15ರಂದು ತೀರ್ಪು ನೀಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಅನುಷ್ಠಾನವು ನಿಧಾನಗತಿಯಲ್ಲಿ ಆಗುತ್ತಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರ್ದೇಶನ ನೀಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರು ಪೀಠದಲ್ಲಿದ್ದರು.
‘ಸಾರ್ವಜನಿಕ ಸ್ಥಳಗಳಿಗೆ ಅಂಗವಿಕಲರಿಗೆ ಸುಲಭವಾಗಿ ಪ್ರವೇಶ ಸಿಗುವಂತಾಗಬೇಕು. ಇದಕ್ಕಾಗಿ ಎರಡು ಬಗೆಯ ವಿಧಾನ ಅನುಸರಿಸಬೇಕು. ಮೊದಲನೆಯದಾಗಿ ಈಗಿರುವ ಮೂಲಸೌಕರ್ಯಗಳು ಮಾನದಂಡಗಳಿಗೆ ಅನುಗುಣವಾಗಿ ಇರಬೇಕು. ಎರಡನೆದಾಗಿ ಹೊಸದಾಗಿ ಒದಗಿಸುವ ಮೂಲಸೌಕರ್ಯಗಳು ಅಂಗವಿಕಲರಿಗೂ ಅನುಕೂಲವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಪೀಠ ಸೂಚಿಸಿದೆ.
ಅಂಗವಿಕಲರಿಗಾಗಿ ಹೊಸ ಮಾನದಂಡಗಳನ್ನು ರೂಪಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರಕ್ಕೆ ನೆರವು ನೀಡುವ ಜವಾಬ್ಧಾರಿಯನ್ನು ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ಕಾನೂನು ವಿಶ್ವವಿದ್ಯಾಲಯದ ಅಂಗವೈಕಲ್ಯ ಅಧ್ಯಯನ ಕೇಂದ್ರಕ್ಕೆ ಪೀಠ ವಹಿಸಿದೆ.
ಈ ಸಂಬಂಧ ರಾಜೀವ್ ರತೂರಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠವು ಮುಂದಿನ ಮಾರ್ಚ್ 7ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.