ADVERTISEMENT

ಪತ್ರಕರ್ತೆ ಮಮತಾ ವಿರುದ್ಧ ಬಲವಂತದ ಕ್ರಮ ಬೇಡ: ಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 13:11 IST
Last Updated 24 ಅಕ್ಟೋಬರ್ 2024, 13:11 IST
supreme-court-
supreme-court-   

ನವದೆಹಲಿ: ಪತ್ರಕರ್ತೆ ಮಮತಾ ತ್ರಿಪಾಠಿ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಬಲವಂತದಿಂದ ಯಾವುದೇ ಕ್ರಮ ಜರುಗಿಸಬಾರದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸೂಚನೆ ನೀಡಿದೆ.

ನಾಲ್ಕು ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು ಎಂದು ಕೋರಿ ಮಮತಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಕೆ. ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು ನಡೆಸಿತು. ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿತು. 

ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಎಫ್‌ಐಆರ್‌ಗಳನ್ನು ರಾಜಕೀಯ ಪ್ರೇರಿತವಾಗಿ ದಾಖಲು ಮಾಡಲಾಗಿದೆ ಎಂದು ಮಮತಾ ಅವರು ದೂರಿದ್ದಾರೆ. ತಾವು ಎಕ್ಸ್‌ ವೇದಿಕೆಯಲ್ಲಿ ಮಾಡಿರುವ ಕೆಲವು ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪತ್ರಕರ್ತರ ಬರಹವು ಸರ್ಕಾರದ ಕುರಿತ ಟೀಕೆ ಎಂದು ಅನಿಸಿದ ಮಾತ್ರಕ್ಕೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಅಭಿಷೇಕ್ ಉಪಾಧ್ಯಾಯ ಎನ್ನುವವರ ಪ್ರಕರಣದಲ್ಲಿ ಹೇಳಿತ್ತು.

ಮಮತಾ ವಿರುದ್ಧ ದಾಖಲಾಗಿರುವ ಪ್ರಕರಣಗಳು ಶುದ್ಧ ಕಿರುಕುಳ ಎಂದು ಅವರ ವಕೀಲರು ದೂರಿದರು.

ಮಮತಾ ಅವರು ತಮ್ಮ ವರದಿಗಳ ಮೂಲಕ, ರಾಜ್ಯದಲ್ಲಿ ನಡೆದಿರುವ ವಿದ್ಯಮಾನವನ್ನು ಹೇಳುವ ಕೆಲಸ ಮಾಡಿದ್ದಾರೆ, ಸತ್ಯದ ಕಡೆ ಬೊಟ್ಟು ಮಾಡಿ ತೋರಿಸಲು ಯತ್ನಿಸಿದ್ದಾರೆ. ಆದರೆ ಇದು ಆಡಳಿತದ ಶಕ್ತಿಸೌಧಕ್ಕೆ ಸರಿಕಂಡಿಲ್ಲ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.