ADVERTISEMENT

ರೋಗಿ ಕುಟುಂಬಸ್ಥರಿಗೆ ₹ 10 ಲಕ್ಷ ಪರಿಹಾರ: ಮಣಿಪಾಲ ಆಸ್ಪತ್ರೆಗೆ ಸುಪ್ರೀಂ ಕೋರ್ಟ್‌

ಅರಿವಳಿಕೆ ನೀಡುವಾಗ ಸೇವಾ ನ್ಯೂನತೆ * ₹ 5 ಲಕ್ಷ ಪರಿಹಾರ ಘೋಷಿಸಿದ್ದ ಜಿಲ್ಲಾ ಗ್ರಾಹಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 1:05 IST
Last Updated 21 ಫೆಬ್ರುವರಿ 2024, 1:05 IST
   

ನವದೆಹಲಿ: ಶ್ವಾಸಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯು ನಂತರ ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದು, ಸೇವಾ ನ್ಯೂನತೆಯನ್ನು ತೋರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಮೃತಪಟ್ಟಿರುವ ರೋಗಿಯ ಕು‌ಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಪ್ರಕರಣದ ವಿವರ

ADVERTISEMENT

ಜೆ.ಡಗ್ಲಾಸ್‌ ಲೂಯಿಸ್‌ ಎಂಬುವವರು 2003ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ನಂತರ, ಲೂಯಿಸ್ ಅವರು ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು.  

ಸೇವಾ ನ್ಯೂನತೆಗಾಗಿ ಪರಿಹಾರ ನೀಡುವಂತೆ ಕೋರಿ ಲೂಯಿಸ್‌ ಅವರು ಬೆಂಗಳೂರು ಜಿಲ್ಲಾ ಗ್ರಾಹಕರ ವೇದಿಕೆ ಮೊರೆಹೋಗಿದ್ದರು. ವೇದಿಕೆಯು‌ ₹ 5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ನಂತರ, ಅವರು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಯು‌ತ್ತಿದ್ದಾಗ, 2015‌ರಲ್ಲಿ ಲೂಯಿಸ್‌ ಮೃತಪಟ್ಟರು.

ನಂತರ, ಲೂಯಿಸ್‌ ಪತ್ನಿ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ಅರಿವಳಿಕೆ ವಿಭಾಗದ ಮುಖ್ಯಸ್ಥರ ಬದಲು, ಹೃದ್ರೋಗ ಅರಿವಳಿಕೆ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯರೊಬ್ಬರು ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ನ್ಯಾಯಯುತ ಪರಿಹಾರ ಘೋಷಿಸುವುದಕ್ಕಾಗಿ ಜಿಲ್ಲಾ ಗ್ರಾಹಕರ ವೇದಿಕೆಯು ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕಿತ್ತು. ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ಸಂದ‌ರ್ಭದಲ್ಲಿ ರೋಗಿ ಮೃತಪಟ್ಟಿದ್ದಾರೆ. ಹೀಗಾಗಿ, ಸಾಕ್ಷ್ಯಗಳ ಮರುಪರಿಶೀಲನೆಗೆ ನಿರ್ದೇಶನ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ’ ಎಂದೂ ಪೀಠ ಹೇಳಿದೆ.

‘ಈ ಪ್ರಕರಣದಲ್ಲಿ, ತಜ್ಞವೈದ್ಯರು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಿಗೆ ಮಣಿಪಾಲ ‌ಆಸ್ಪತ್ರೆ ಆಕ್ಷೇಪ ವ್ಯಕ್ತಪಡಿಸಿಲ್ಲ‌ ಹಾಗೂ ಈ ಪ್ರಕರಣ ಕುರಿತು ಅಭಿಪ್ರಾಯ ತಿಳಿಸುವುದಕ್ಕಾಗಿ ತಜ್ಞರನ್ನು ನೇಮಕ ಮಾಡುವಂತೆ ಜಿಲ್ಲಾ ಗ್ರಾಹಕರ ವೇದಿಕೆಗೆ‌ ಅರ್ಜಿಯನ್ನೂ ಸಲ್ಲಿಸಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಲೂಯಿಸ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಕ್ಷೇತ್ರೀಯ ಮಾರಾಟ ವ್ಯವಸ್ಥಾಪಕರಾಗಿದ್ದರು. ಶಸ್ತ್ರಚಿಕಿತ್ಸೆ ನಂತರ ಧ್ವನಿ ಪೆಟ್ಟಿಗೆಗೆ ಹಾನಿಯಾಗಿ, ಮಾತನಾಡುವ ಶಕ್ತಿ ಕಳೆದುಕೊಂಡಿದ್ದರಿಂದ ಯಾವುದೇ ಬಡ್ತಿ ಇಲ್ಲದೇ ಹಲವು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಇದ್ದರು. 2015ರಲ್ಲಿ ಮೃತಪಟ್ಟರು’ ಎಂದು ಲೂಯಿಸ್‌ ಪರ ವಾದ ಮಂಡಿ‌ಸಿದ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

‘ಆಸ್ಪತ್ರೆಯಿಂದ ಸೇವಾ ನ್ಯೂನತೆ ಆಗಿದ್ದು ಗೊತ್ತಾದ ನಂತರವೂ, ಜಿಲ್ಲಾ ಗ್ರಾಹಕರ ವೇದಿಕೆಯು ₹ 5 ಲಕ್ಷ ಪರಿಹಾರ ಪ್ರಕಟಿಸಿದೆ. ನನ್ನ ಕಕ್ಷಿದಾರರಿಗೆ ₹ 18 ಲಕ್ಷ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಆಗ, ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ (₹10 ಲಕ್ಷ) ನ್ಯಾಯಪೀಠ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.