ADVERTISEMENT

ನೈಸ್ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:07 IST
Last Updated 18 ಜುಲೈ 2019, 19:07 IST
   

ನವದೆಹಲಿ: ಬೆಂಗಳೂರು-– ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್ (ಬಿಎಂಐಸಿ) ಯೋಜನೆಗೆ ನೀಡಲಾದ 20,000 ಎಕರೆ ಭೂಮಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ಅಧಿಕಾರಿಗಳ ವಿರುದ್ಧ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಸಂಸ್ಥೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

ನೈಸ್‌ ಪರ ವಕೀಲ ನೀರಜ್‌ ಕಿಶನ್‌ ಕೌಲ್‌ ಹಾಗೂ ರಾಜ್ಯ ಸರ್ಕಾರದ ಪರ ವಕೀಲ ಚಂದರ್‌ ಉದಯ್‌ ಸಿಂಗ್‌ ಅವರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು, ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಆಗದು ಎಂದು ಅಭಿಪ್ರಾಯಪಟ್ಟಿತು.

ಯೋಜನೆ ಕುರಿತು 1997 ರ ಏಪ್ರಿಲ್ 3ರಂದು ಮಾಡಿಕೊಂಡಿದ್ದ ಒಪ್ಪಂದ ಕುರಿತಂತೆ ವಿವಾದ ಇದೆ. 2006ರ ಏಪ್ರಿಲ್ 20ರಂದು ತಾನು ನೀಡಲಾದ ತೀರ್ಪಿಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅಸಹಕಾರ ತೋರುತ್ತಿರುವುದಾಗಿ ಹೇಳಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ADVERTISEMENT

ಎಕ್ಸ್‌ಪ್ರೆಸ್‌ ವೇ, ಪೆರಿಫೆರಲ್‌ ವರ್ತುಲ ರಸ್ತೆ ಹಾಗೂ ಟೌನ್‌ಶಿಪ್‌ ಸ್ಥಾಪನೆಯ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದ ಮತ್ತು ಷರತ್ತುಗಳ ಕುರಿತು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆ ಬಾಕಿ ಇವೆ ಎಂದು ಇದೇ ವೇಳೆ ಪೀಠಕ್ಕೆ ತಿಳಿಸಲಾಯಿತು.

ಸಂಸ್ಥೆಯು ಬೆಂಗಳೂರು ಭಾಗದತ್ತ ಗಮನ ಹರಿಸಿದ್ದರಿಂದ ಯೋಜನೆಯ ಕಾಮಗಾರಿ ಅಪೂರ್ಣವಾಗಿದೆ. ಅಲ್ಲದೆ, ಪೆರಿಫೆರಲ್‌ ರಸ್ತೆಯ ಪಕ್ಕದಲ್ಲಿ ವಸತಿ ಉದ್ದೇಶದ ಕಾಂಪ್ಲೆಕ್ಸ್‌ ನಿರ್ಮಿಸುವತ್ತಲೇ ಸಂಸ್ಥೆ ಆದ್ಯತೆ ನೀಡಿದ್ದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಿಸಿದರು.

ಪೆರಿಫೆರಲ್‌ ಮತ್ತು ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಟೋಲ್ ಸಂಗ್ರಹಿಸಲಾಗುತ್ತಿದೆ. ಕೇವಲ ಐದು ಕಿಲೋಮೀಟರ್‌ನಷ್ಟು ನಿರ್ಮಿಸಲಾದ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪೂರ್ಣಗೊಂಡ ನಂತರವೇ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸಬೇಕು ಎಂಬ ಒಪ್ಪಂದವಿದೆ. ವಿಳಂಬ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಯೋಜನೆಗೆ ಅಗತ್ಯವಿರುವ ಭೂಮಿಯ ಡಿಮಾರ್ಕೇಶನ್‌ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

1997ರಲ್ಲಿ ಕೈಗೆತ್ತಿಕೊಳ್ಳಲಾದ ಈ ಯೋಜನೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಯೋಜನೆ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದ ನಿರ್ದಿಷ್ಟ ವ್ಯಕ್ತಿಯೊಬ್ಬರು ಪ್ರತಿ ಬಾರಿಯೂ ಹೊಸ ಕತೆ ಹೇಳುತ್ತಲೇ ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯ ಭೂಮಿಯನ್ನೇ ನೀಡಲಿಲ್ಲ ಎಂದು ನೈಸ್‌ ಪರ ವಕೀಲರು ವಾದಿಸಿದರು.

ಹೆಚ್ಚುವರಿ ಭೂಮಿ ಹಿಂದಿರುಗಿಸುವುದು, ವಸತಿ ಯೋಜನೆಯ ಅಂತರ್‌ ಬದಲಾವಣೆಯ ಅನುಮತಿ ಪಡೆಯುವುದು, ರಸ್ತೆ ಗುಣಮಟ್ಟ, ಭೂಮಿಯ ಕ್ರಯ ಪತ್ರಗಳ ನಿರ್ವಹಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳಿವೆ ಎಂದು ರಾಜ್ಯ ಸರ್ಕಾರವು ಪೀಠಕ್ಕೆ ಲಿಖಿತ ಟಿಪ್ಪಣಿ ಸಲ್ಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.