ADVERTISEMENT

ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ಅಸಮರ್ಥನೀಯ: ಸುಪ್ರೀಂ ಕೋರ್ಟ್

ಪಿಟಿಐ
Published 24 ಜೂನ್ 2024, 15:20 IST
Last Updated 24 ಜೂನ್ 2024, 15:20 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಹರಿಯಾಣ ಸರ್ಕಾರವು ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯದ ಕೆಲವು ವರ್ಗಗಳಿಗೆ ಹೆಚ್ಚುವರಿ ಅಂಕ ನೀಡುವ ವ್ಯವಸ್ಥೆಯನ್ನು ರದ್ದುಗೊಳಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಕೆಲವರಿಗೆ ಹೆಚ್ಚುವರಿ ಅಂಕ ನೀಡುವುದು ‘ಜನಪ್ರಿಯ ಕ್ರಮ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠವು, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ADVERTISEMENT

ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಕೆಲವು ವರ್ಗದ ಅಭ್ಯರ್ಥಿಗಳಿಗೆ ಸಾಮಾಜಿಕ ಆರ್ಥಿಕ ಪರಿಗಣನೆಯ ಮೇಲೆ ಹೆಚ್ಚುವರಿ ಅಂಕ ನೀಡುವ ಹರಿಯಾಣ ಸರ್ಕಾರದ ಕ್ರಮವು ಅಸಾಂವಿಧಾನಿಕ ಎಂದು ಹೈಕೋರ್ಟ್ ಆದೇಶ ನೀಡಿತ್ತು. 

‘ಪ್ರತಿಭಾವಂತ ಅಭ್ಯರ್ಥಿಯು ಪರೀಕ್ಷೆಯಲ್ಲಿ 60 ಅಂಕ ಪಡೆಯುತ್ತಾನೆ. ಮತ್ತೊಬ್ಬನೂ ಪರೀಕ್ಷೆಯಲ್ಲಿ 60 ಅಂಕ ಪಡೆದು, ಆತನಿಗೆ ಹೆಚ್ಚುವರಿ 5 ಅಂಕ ಸಿಕ್ಕರೆ, ಆತ ಅಂಕದಲ್ಲಿ ಮೇಲೇರುತ್ತಾನೆ. ಇವೆಲ್ಲವೂ ಜನಪ್ರಿಯ ಕ್ರಮಗಳಾಗಿವೆ. ಒಬ್ಬ ಹೆಚ್ಚುವರಿ 5 ಅಂಕ ಪಡೆಯುವ ಈ ಕ್ರಮವನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಪೀಠವು ಪ್ರಶ್ನಿಸಿದೆ.

‘ಹೈಕೋರ್ಟ್ ಆದೇಶವನ್ನು ಪರಿಶೀಲಿಸಿದ ಬಳಿಕ, ಅದರಲ್ಲಿ ಯಾವ ತಪ್ಪೂ ಇಲ್ಲ ಎನ್ನುವುದು ನಮಗೆ ಕಂಡುಬಂದಿದೆ’ ಎಂದು ಅಭಿಪ್ರಾಯ ಪಟ್ಟಿರುವ ಪೀಠವು ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. 

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ವಿರುದ್ಧ ಹರಿಯಾಣ ಲೋಕಸೇವಾ ಆಯೋಗವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.