ನವದೆಹಲಿ: 2019ರ ಲೋಕಸಭಾ ಚುನಾವಣೆ ಹಾಗೂ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬದಲಾಗಿ ಬ್ಯಾಲೆಟ್ ಪೇಪರ್ ಬಳಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಅರ್ಜಿ ಸಲ್ಲಿಸಿದ್ದ ‘ನ್ಯಾಯ ಭೂಮಿ’ ಸ್ವಯಂ ಸೇವಾ ಸಂಸ್ಥೆಯು, ‘ಇವಿಎಂ ದುರ್ಬಳಕೆಯಾಗುವ ಸಾಧ್ಯತೆ ಇದೆ’ ಎಂದಿತ್ತು. ಈ ವಾದವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ತಳ್ಳಿಹಾಕಿದೆ.
‘ಎಲ್ಲಾ ವ್ಯವಸ್ಥೆ, ಯಂತ್ರದಿಂದ ಉಪಯೋಗ ಪಡೆಯಬಹುದು ಹಾಗೂ ದುರುಪಯೋಗ ಪಡಿಸಿಕೊಳ್ಳಬಹುದು. ಅನುಮಾನಗಳು ಎಲ್ಲಾ ಕಡೆಗಳಲ್ಲಿಯೂ ಇರುತ್ತವೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆಗಸ್ಟ್‌ನಲ್ಲಿ ಚುನಾವಣಾ ಆಯೋಗದೊಂದಿಗೆ ನಡೆದ ಸಭೆಯಲ್ಲಿ, ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಕಾಂಗ್ರೆಸ್, ಜನತಾ ದಳ (ಜಾತ್ಯಾತೀತ), ಬಿಎಸ್‌ಪಿ, ಎಸ್‌ಪಿ ಸೇರಿ 17 ಪಕ್ಷಗಳುಒತ್ತಾಯಿಸಿದ್ದವು. ಆಯೋಗವು ಈ ಸಭೆಗೆ 7 ರಾಷ್ಟ್ರೀಯ ಪಕ್ಷಗಳು ಮತ್ತು 51 ಪ್ರಾದೇಶಿಕ ಪಕ್ಷಗಳನ್ನು ಆಹ್ವಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.