ADVERTISEMENT

ಜ್ಞಾನವಾಪಿ ಪ್ರಕರಣದ ವರ್ಗಾವಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 3 ನವೆಂಬರ್ 2023, 16:41 IST
Last Updated 3 ನವೆಂಬರ್ 2023, 16:41 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ನವದೆಹಲಿ: ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಏಕಸದಸ್ಯ ನ್ಯಾಯಪೀಠದಿಂದ ಹಿಂದಕ್ಕೆ ಪಡೆಯಲು ಅಲಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೈಗೊಂಡ ಆಡಳಿತಾತ್ಮಕ ತೀರ್ಮಾನವನ್ನು ಪ್ರಶ್ನಿಸಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನದ ಪುನರ್‌ ನಿರ್ಮಾಣಕ್ಕೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯೊಂದರ ಕುರಿತ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸುತ್ತಿತ್ತು.

ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಅದನ್ನು ವಜಾಗೊಳಿಸಿದೆ. ‘ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೀಡಿರುವ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡಬಾರದು. ಹೈಕೋರ್ಟ್‌ಗಳಲ್ಲಿ ಇದೊಂದು ಮಾದರಿಯಾಗಿ ಬಂದಿದೆ. ಇದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಕೈಯಲ್ಲೇ ಇರಬೇಕು’ ಎಂದು ಪೀಠ ಹೇಳಿತು.

ADVERTISEMENT

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಏಕಸದಸ್ಯ ಪೀಠದಿಂದ ಹಿಂಪಡೆದು, ಇನ್ನೊಂದು ನ್ಯಾಯಪೀಠಕ್ಕೆ ವಹಿಸಿದ್ದನ್ನು ಮಸೀದಿ ಸಮಿತಿಯು ಪ್ರಶ್ನಿಸಿತ್ತು. ಪ್ರಕರಣದ ವರ್ಗಾವಣೆಗೆ ಇದ್ದ ಕಾರಣಗಳನ್ನು ಸಿಜೆಐ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.