ADVERTISEMENT

ಮಲಯಾಳದ ‘ಮೀಶ’ ಕಾದಂಬರಿ ನಿಷೇಧ ಅರ್ಜಿ ವಜಾಗೊಳಿಸಿದ ಸುಪ್ರೀಂ

ಹಿಂದೂ ಮಹಿಳೆಯರು ದೇಗುಲಕ್ಕೆ ಹೋಗುವುದನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ

ಪಿಟಿಐ
Published 5 ಸೆಪ್ಟೆಂಬರ್ 2018, 13:16 IST
Last Updated 5 ಸೆಪ್ಟೆಂಬರ್ 2018, 13:16 IST
   

ನವದೆಹಲಿ: ಮಲಯಾಳ ಲೇಖಕ ಎಸ್‌. ಹರೀಶ್‌ ಅವರ ‘ಮೀಶ’ ಕಾದಂಬರಿ ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಹಿಂದೂ ಮಹಿಳೆಯರು ದೇಗುಲಕ್ಕೆ ಹೋಗುವುದನ್ನು ಕಾದಂಬರಿಯಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ದೆಹಲಿ ನಿವಾಸಿ ಎನ್‌. ರಾಧಾಕೃಷ್ಣನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

‘ಬರಹಗಾರನ ಕಲೆಗಾರಿಕೆಯನ್ನು ಗೌರವಿಸಬೇಕು. ಕೃತಿಯೊಂದನ್ನು ಬಿಡಿಬಿಡಿಯಾಗಿ ಓದದೇ ಸಮಗ್ರವಾಗಿ ಓದಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತೀರ್ಪು ನೀಡುವ ವೇಳೆ ಅಭಿಪ್ರಾಯಪಟ್ಟಿತು.

‘ಸೃಜನಶೀಲ ಕೃತಿಯೊಂದರ ವೈಯಕ್ತಿಕ ಗ್ರಹಿಕೆಯನ್ನು ಕಾನೂನಿನ ಚೌಕಟ್ಟಿನಡಿ ಪರಾಮರ್ಶಿಸಲು ಅವಕಾಶ ನೀಡಬಾರದು. ಚಿತ್ರಗಾರನೊಬ್ಬ ಬಣ್ಣಗಳಲ್ಲಿ ಆಟವಾಡುವಂತೆ ಬರಹಗಾರನನ್ನು ಶಬ್ದಗಳಲ್ಲಿ ಆಟವಾಡಲು ಬಿಡಬೇಕು’ ಎಂದು ನ್ಯಾಯಪೀಠ ಹೇಳಿತು.

‘ಪುಸ್ತಕಗಳನ್ನು ನಿಷೇಧಿಸುವುದರಿಂದ ಮುಕ್ತ ಚಿಂತನೆಗೆ ಧಕ್ಕೆಯಾಗುತ್ತದೆ. ಕಾನೂನಲನ್ನು ಉಲ್ಲಂಘಿಸಿದ್ದರೆ ಮಾತ್ರ ಸಾಹಿತ್ಯಿಕ ಕೆಲಸಗಳನ್ನು ನಿಷೇಧಿಸಲು ಸಾಧ್ಯ’ ಎಂದು ಆಗಸ್ಟ್‌ 2ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.

‘ದೇಗುಲದಲ್ಲಿ ಪೂಜೆ ಮಾಡುವ ಬ್ರಾಹ್ಮಣರ ಬಗ್ಗೆ ಕೃತಿಯಲ್ಲಿ ಉಲ್ಲೇಖಿಸಿರುವ ಕೆಲ ಅಂಶಗಳು ಜಾತೀಯತೆಯಿಂದ ಕೂಡಿವೆ. ಕೃತಿ ಪ್ರಕಟಣೆ, ಆನ್‌ಲೈನ್‌ ಮಾರಾಟ ತಡೆಯಲು ಕೇರಳ ಸರ್ಕಾರವೂ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.

‘ನೀವು ಇದಕ್ಕೆ ಅನಗತ್ಯ ಪ್ರಾಮುಖ್ಯ ನೀಡುತ್ತಿದ್ದೀರಿ. ಈ ಅಂತರ್ಜಾಲ ಯುಗದಲ್ಲಿ ನೀವು ಇದನ್ನೊಂದು ವಿಷಯ ಮಾಡುತ್ತಿದ್ದೀರಿ. ಇದನ್ನು ಬಿಟ್ಟುಬಿಡುವುದು ಉತ್ತಮ’ ಎಂದು ಪೀಠ ಹೇಳಿತು.

ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಕಾದಂಬರಿಯನ್ನು ಬಲಪಂಥೀಯ ಸಂಘಟನೆಗಳಿಂದ ಬೆದರಿಕೆ ಬಂದ ಕಾರಣವೊಡ್ಡಿ ಲೇಖಕ ಎಸ್‌. ಹರೀಶ್‌ ಹಿಂಪಡೆದಿದ್ದರು. ಹರೀಶ್ ಅವರಿಗೆ ಕೇರಳ ಸರ್ಕಾರ ಬೆಂಬಲ ಸೂಚಿಸಿತ್ತು. ‘ಬರಹಗಾರರ ಅಭಿವ್ಯಕ್ತಿ ಸ್ವಾಂತಂತ್ರ್ಯದ ಪರವಾಗಿ ಸರ್ಕಾರ ಸದಾ ನಿಲ್ಲುತ್ತದೆ. ಅವರ ಮೇಲೆ ಯಾವುದೇ ರೀತಿಯ ದಾಳಿಗೆ ಅವಕಾಶ ನೀಡುವುದಿಲ್ಲ’ ಎಂದು ಕೇರಳದ ಮುಖ್ಯಮಂತ್ರಿ ‍ಪಿಣರಾಯಿ ವಿಜಯನ್ ಹೇಳಿದ್ದರು.

ಲೇಖಕ ಎಸ್‌. ಹರೀಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.