ADVERTISEMENT

ಇವಿಎಂ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 12 ಆಗಸ್ಟ್ 2022, 11:13 IST
Last Updated 12 ಆಗಸ್ಟ್ 2022, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಚುನಾವಣೆಗಳಿಗೆ ಮತಪತ್ರಗಳ (ಬ್ಯಾಲೆಟ್ ಪೇಪರ್) ಬದಲು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಅವಕಾಶ ನೀಡಿರುವ ಪ್ರಸ್ತಾವನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಎಂ.ಎಂ.ಸುಂದ್ರೇಶ್‌ ಅವರಿದ್ದ ಪೀಠವು,ಚುನಾವಣೆಗಳಲ್ಲಿ ಮತದಾನಕ್ಕೆ ವಿದ್ಯುನ್ಮಾನ ಯಂತ್ರಗಳನ್ನುಜನಪ್ರತಿನಿಧಿ ಕಾಯ್ದೆಯಡಿ (1951ರ ಕಾಯ್ದೆಯ ಸೆಕ್ಷನ್ 61ಎ) ಬಳಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎಂ.ಎಲ್‌. ಶರ್ಮಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿತು.

ಅರ್ಜಿದಾರರು, ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿಸಿ ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿದ್ದರು.

ADVERTISEMENT

ಅರ್ಜಿದಾರ ಶರ್ಮಾ ಅವರು, ‘ಮತ ಪತ್ರದ ಬದಲು, ಮತಯಂತ್ರ ಬಳಸಲು ಅವಕಾಶ ನೀಡಿರುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61ಎ ಅನ್ನು ಪ್ರಶ್ನಿಸುತ್ತಿರುವೆ. ಇದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಜನಪ್ರತಿನಿಧಿಗಳ ಬಹುಮತದಿಂದ ಅಂಗೀಕಾರಗೊಂಡಿಲ್ಲ’ ಎಂದು ವಾದಿಸಿದರು.

‘ಸಂಸತ್ತಿನಲ್ಲಿನಡೆದಿರುವುದನ್ನು ಪ್ರಶ್ನಿಸುತ್ತಿರುವಿರಾ, ಸಾರ್ವತ್ರಿಕ ಮತದಾನವನ್ನು ಪ್ರಶ್ನಿಸುತ್ತಿರುವಿರಾ ಅಥವಾ ಏನನ್ನು ನೀವು ಪ್ರಶ್ನಿಸುತ್ತಿರುವಿರಿ’ ಎಂದು ಅರ್ಜಿದಾರರನ್ನು ಪೀಠ ಪ್ರಶ್ನಿಸಿತು. ‘ಅರ್ಜಿಯಲ್ಲಿ ನಮಗೆ ಹುರುಳು ಕಾಣಿಸುತ್ತಿಲ್ಲ. ಹಾಗಾಗಿ ವಜಾಗೊಳಿಸಲಾಗುತ್ತಿದೆ’ ಎಂದು ಮೌಖಿಕವಾಗಿ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.