ನವದೆಹಲಿ (ಪಿಟಿಐ): 2002ರ ಗುಜರಾತ್ ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ಗೆ (ಬಿಬಿಸಿ) ಭಾರತದಲ್ಲಿ ನಿಷೇಧ ಹೇರ
ಬೇಕು ಎಂದು ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ.
ಅರ್ಜಿಯು ‘ಸಂಪೂರ್ಣ ತಪ್ಪುಗ್ರಹಿಕೆಯಿಂದ ಕೂಡಿದೆ’ ಹಾಗೂ ‘ಹುರುಳಿಲ್ಲದ್ದು’ ಎಂದು ನ್ಯಾಯಾಲ
ಯವು ಅಭಿಪ್ರಾಯಪಟ್ಟಿದೆ.
ಸಾಕ್ಷ್ಯಚಿತ್ರದ ವಿರುದ್ಧ ಮುಜಫ್ಫರ್ ಪುರದ ನಿವಾಸಿ, ರೈತ ಬೀರೇಂದ್ರ ಕುಮಾರ್ ಸಿಂಗ್ ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ‘ಈ ಸಾಕ್ಷ್ಯಚಿತ್ರವು ಮೋದಿ ವಿರುದ್ಧ ಪ್ರಚಾರ ಮಾತ್ರವಲ್ಲ, ಅವರ ಚಾರಿತ್ರ್ಯಕ್ಕೆ ಕಳಂಕ ತರುವುದಾಗಿದೆ. ಜೊತೆಗೆ ಹಿಂದೂ ವಿರೋಧಿ ಧೋರಣೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಭಾರತದ ಸೌಹಾರ್ದವನ್ನು ಹದಗೆಡಿಸುವ ಪ್ರಯತ್ನವಾಗಿದೆ’ ಎಂದು ವಾದಿಸಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಂ.ಎಂ. ಸುಂದರೇಶ್ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆಯನ್ನು ನಡೆಸಿತು.
‘ಒಂದು ಸಾಕ್ಷ್ಯಚಿತ್ರವು ಭಾರತವನ್ನು ಹೇಗೆ ಬಾಧಿಸುತ್ತದೆ. ಅರ್ಜಿಯು ಸಂಪೂರ್ಣವಾಗಿ ತಪ್ಪುಗ್ರಹಿಕೆಯಿಂದ ಕೂಡಿದೆ. ಜೊತೆಗೆ, ಇದೊಂದು ಹುರುಳಿಲ್ಲದ ಅರ್ಜಿಯಾಗಿದೆ. ಅರ್ಜಿಯ ಮೂಲಕ ನೀವು ಈ ರೀತಿ ವಾದಿಸುತ್ತಿರುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಪೀಠ ಈ ಅರ್ಜಿಯನ್ನು ವಜಾ ಮಾಡಿತು.
ಹಿರಿಯ ವಕೀಲೆ ಪಿಂಕಿ ಆನಂದ್ ಅವರು ಅರ್ಜಿದಾರರ ಪರ ವಾದಿಸಿದರು. ‘ಭಾರತವು ಜಗತ್ತಿನಲ್ಲಿ
ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತೀಯನೊಬ್ಬ ಬ್ರಿಟನ್‌ನ ಪ್ರಧಾನಿಯಾಗಿರುವ ಈ ಹೊತ್ತಿನಲ್ಲಿ ಈ ಸಾಕ್ಷ್ಯಚಿತ್ರ ಹೊರಬಂದಿದೆ. ಆದ್ದರಿಂದ ಈ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲೇ ಬಿಡುಗಡೆ ಮಾಡಿರುವುದರ ಹಿನ್ನೆಲೆ
ಯನ್ನು ಅರ್ಥಮಾಡಿಕೊಳ್ಳಬೇಕು’ ಎಂದು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.