ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬಂಧಿಸಿರುವ ಐವರು ಹೋರಾಟಗಾರರ ಗೃಹಬಂಧನ ಅವಧಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 17ರವರೆಗೆ ವಿಸ್ತರಿಸಿದೆ.
ಹೋರಾಟಗಾರರ ಗೃಹಬಂಧನ ಅವಧಿ ವಿಸ್ತರಣೆಯಾಗುತ್ತಿರುವುದು ಇದು ಮೂರನೇ ಸಲ. ಸುಪ್ರಿಂಕೋರ್ಟ್ ಆದೇಶದ ಅನ್ವಯ ಸದ್ಯ ಐವರೂ ಗೃಹಬಂಧನದಲ್ಲಿದ್ದಾರೆ.
ಹೋರಾಟಗಾರರ ಬಂಧನ ಪ್ರಶ್ನಿಸಿ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಮತ್ತು ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಬುಧವಾರ ಕೈಗೆತ್ತಿಕೊಂಡಿತು.
ಆದರೆ, ಥಾಪರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಗೈರು ಹಾಜರಾದ ಕಾರಣ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಹೋರಾಟಗಾರರು ಗೃಹಬಂಧನದಲ್ಲಿ ಇರಲಿ ಎಂದು ಹೇಳಿದೆ.
ಆ. 28ರಂದು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದ ಪುಣೆಯ ಪೊಲೀಸರು ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಅರುಣ್ ಫೆರೆರಾ, ವರ್ನಾನ್ ಗೋನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್‌ಲಾಖ್ ಅವರನ್ನು ಬಂಧಿಸಿದ್ದರು.
ಬಂಧನ ಪ್ರಶ್ನಿಸಿ ರೋಮಿಲಾ ಥಾಪರ್ ಹಾಗೂ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೆ.5ರವರೆಗೆ ಐವರಿಗೂ ಗೃಹಬಂಧನ ವಿಧಿಸಿತ್ತು. ಸೆ.12ರವರೆಗೆ ಪುನಃ ಅವಧಿಯನ್ನು ವಿಸ್ತರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.