ನವದೆಹಲಿ: ಗೋದ್ರೋತ್ತರ ಗಲಭೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಗ್ಧ ಜನರನ್ನು ಸಾಕ್ಷಿಗಳಾಗಿ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಂಧನಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಎರಡು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ಈ ಪ್ರಕರಣದಲ್ಲಿ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅದರ ಅವಧಿ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಶರಣಾಗುವಂತೆ ಗುಜರಾತ್ ಹೈಕೋರ್ಟ್ ಜುಲೈ 1ರಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ತ್ರಿಸದಸ್ಯ ಪೀಠವು, ತೀಸ್ತಾ ಅವರನ್ನು ಜುಲೈ 19ರವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದೆ.
ಗುಜರಾತ್ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ‘ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ’ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಒಪ್ಪಿದ ಪೀಠವು, ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.
ತೀಸ್ತಾ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ‘ತ್ವರಿತವಾಗಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು’ ಎಂದು ಕೋರಿದರು.
2002ರ ಗೋದ್ರೋತ್ತರ ಗಲಭೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಪರಾಧಿಗಳನ್ನು ಬಂಧಿಸಲು ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ, ಗುಜರಾತ್‌ನ ನಿವೃತ್ತ ಡಿಜಿಪಿ ಆರ್.ಬಿ. ಶ್ರೀಕುಮಾರ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.