ನವದೆಹಲಿ: ತಿರುಪತಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ, ಐವರು ಸದಸ್ಯರ ‘ಸ್ವತಂತ್ರ’ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
ಆಂಧ್ರ ಪ್ರದೇಶ ಸರ್ಕಾರ ಸೆಪ್ಟೆಂಬರ್ 26ರಂದು ನೇಮಿಸಿರುವ ಎಸ್‌ಐಟಿ ರದ್ದಾಗಲಿದ್ದು, ಆ ಸ್ಥಾನವನ್ನು ಸುಪ್ರೀಂ ಕೋರ್ಟ್ ರಚಿಸಿರುವ ಹೊಸ ತನಿಖಾ ತಂಡ ತುಂಬಲಿದೆ.
ಲಾಡು ವಿವಾದದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂದು ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಒಳಗೊಂಡಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ನಡೆಸಿತು.
ಎಸ್‌ಐಟಿ ತನಿಖೆಯು ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಯುವುದು ಸೂಕ್ತ ಎಂದು ತಿಳಿಸಿದ ಪೀಠ, ‘ಕೋಟ್ಯಂತರ ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಇದನ್ನು ರಾಜಕೀಯ ನಾಟಕವಾಗಿ ಪರಿವರ್ತಿಸಲು ನಾವು ಬಯಸುವುದಿಲ್ಲ’ ಎಂದು ಹೇಳಿತು.
‘ಈಗ ಕೇಳಿಬಂದಿರುವ ಆರೋಪ ನಿಜವೇ ಆಗಿದ್ದರೆ ಅದನ್ನು ಒಪ್ಪಲಾಗದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು. ಎಸ್‌ಐಟಿ ತನಿಖೆಯನ್ನು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಮೇಲ್ವಿಚಾರಣೆ ಮಾಡಬಹುದು ಎಂದು ಸಲಹೆ ನೀಡಿದರು.
ಈ ವಿಷಯದ ಬಗ್ಗೆ ಸೆಪ್ಟೆಂಬರ್ 30ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತಿರುಪತಿ ಲಾಡು ವಿವಾದ ಕುರಿತ ತನಿಖೆಯನ್ನು ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ನೆರವಾಗುವಂತೆ ತುಷಾರ್ ಮೆಹ್ತಾ ಅವರನ್ನು ಕೇಳಿಕೊಂಡಿತ್ತು.
ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪ ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಇತ್ತೀಚೆಗೆ ಆರೋಪ ಮಾಡಿದ್ದರು.
‘ಸುಪ್ರೀಂ’ ನಿರ್ಧಾರ ಸ್ವಾಗತಿಸುತ್ತೇವೆ. ಭಗವಾನ್ ವೆಂಕಟೇಶ್ವರ ಸ್ವಾಮಿಯ ಕೋಟ್ಯಂತರ ಭಕ್ತರ ಭಾವನೆಗಳೊಂದಿಗೆ ಆಟವಾಡಿದವರನ್ನು ಶಿಕ್ಷಿಸುವುದು ಸರ್ಕಾರದ ಉದ್ದೇಶಪಟ್ಟಾಭಿರಾಮ್ ಕೊಮ್ಮಾರೆಡ್ಡಿ ಟಿಡಿಪಿ ವಕ್ತಾರ
ಎನ್.ಚಂದ್ರಬಾಬು ನಾಯ್ಡು ಅವರಿಗೆ ದೇವರ ಮೇಲೆ ಭಕ್ತಿ ಇದ್ದರೆ ಜನರ ಕ್ಷಮೆ ಕೇಳಬೇಕು. ತಾನು ಮಾಡಿದ ತಪ್ಪನ್ನು ಮನ್ನಿಸುವಂತೆ ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಲಿವೈ.ಎಸ್.ಜಗನ್ ಮೋಹನ್ ರೆಡ್ಡಿ ವೈಎಸ್‌ಆರ್‌ಸಿಪಿ ಅಧ್ಯಕ್ಷ
ಎಸ್‌ಐಟಿಯಲ್ಲಿ ಯಾರ್‍ಯಾರು?
ವಿಶೇಷ ತನಿಖಾ ತಂಡದಲ್ಲಿ ಸಿಬಿಐ ಮತ್ತು ಆಂಧ್ರ ಪ್ರದೇಶ ಪೊಲೀಸ್‌ನ ತಲಾ ಇಬ್ಬರು ಅಧಿಕಾರಿಗಳು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಒಬ್ಬ ಅಧಿಕಾರಿ ಇರುವರು ಎಂದು ಪೀಠವು ಹೇಳಿತು. ಸಿಬಿಐನ ಇಬ್ಬರು ಅಧಿಕಾರಿಗಳನ್ನು ಅದರ ನಿರ್ದೇಶಕರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಲಿದೆ. ಎಫ್‌ಎಸ್‌ಎಸ್‌ಎಐ ಮುಖ್ಯಸ್ಥರು ಅದರ ಹಿರಿಯ ಅಧಿಕಾರಿಯೊಬ್ಬರನ್ನು ಎಸ್‌ಐಟಿಗೆ ನಾಮನಿರ್ದೇಶನ ಮಾಡುವರು ಪೀಠ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.