ADVERTISEMENT

ಅತ್ಯಾಚಾರ ಪ್ರಕರಣ: ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಪಿಟಿಐ
Published 30 ಸೆಪ್ಟೆಂಬರ್ 2024, 9:02 IST
Last Updated 30 ಸೆಪ್ಟೆಂಬರ್ 2024, 9:02 IST
<div class="paragraphs"><p>ನಟ ಸಿದ್ದಿಕ್‌</p></div>

ನಟ ಸಿದ್ದಿಕ್‌

   

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಮಲಯಾಳ ಚಿತ್ರನಟ ಸಿದ್ದಿಕ್‌ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿದೆ.

ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿದ್ದಿಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು, ಕೇರಳ ಸರ್ಕಾರ ಮತ್ತು ಪ್ರಕರಣದ ಸಂತ್ರಸ್ತರಿಗೆ ನೋಟಿಸ್ ಜಾರಿ ಮಾಡಿದೆ.

ADVERTISEMENT

ಸಿದ್ದಿಕ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ, ಎಂಟು ವರ್ಷಗಳ ನಂತರ, 2024ರಲ್ಲಿ ದೂರು ದಾಖಲಿಸಲಾಗಿದೆ ಎಂದು ವಾದಿಸಿದರು.

ನಟನ ವಿರುದ್ಧ ದೂರು ದಾಖಲಿಸಲು ವಿಳಂಬಕ್ಕೆ ಕಾರಣವೇನು ಎಂದು ಪೀಠವು, ಸಂತ್ರಸ್ತೆಯ ಪರ ವಾದಿಸಿದ ವಕೀಲೆ ವೃಂದಾ ಗ್ರೋವರ್ ಅವರನ್ನು ಪ್ರಶ್ನಿಸಿತು.

ಮಲಯಾಳ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಕಿರುಕುಳ ಮತ್ತು ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ವಿಶಾಲ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಬೇಕು ಎಂದು ವಕೀಲೆ ವೃಂದಾ ಪೀಠಕ್ಕೆ ಮನವಿ ಮಾಡಿದರು. 

ಅತ್ಯಾಚಾರ ಪ್ರಕರಣದಲ್ಲಿ ಸಿದ್ದಿಕ್‌ ಎದುರಿಸುತ್ತಿರುವ ಆರೋಪಗಳ ಗಂಭೀರತೆ ಗಮನಿಸಿ, ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೆಪ್ಟೆಂಬರ್ 24 ರಂದು ತಿರಸ್ಕರಿಸಿದೆ. ಸೂಕ್ತ ತನಿಖೆಗಾಗಿ ಅವರ ಕಸ್ಟಡಿ ವಿಚಾರಣೆ ಅನಿವಾರ್ಯವಾಗಿದೆ ಎಂದೂ ವಾದಿಸಿದರು.

ದೂರುದಾರ ನಟಿ 2019ರಿಂದಲೂ ತಮ್ಮ ವಿರುದ್ಧ ಸುಳ್ಳು ಆಪಾದನೆ ಮಾಡಿಕೊಂಡು ಬಂದಿದ್ದಾರೆ ಎಂದು ನಟ ಸಿದ್ದಿಕ್‌ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬಹಿರಂಗವಾದ ನಂತರ ನಟ ಸಿದ್ದಿಕ್‌ ಸೇರಿದಂತೆ ಮಲಯಾಳ ಚಿತ್ರರಂಗದ ಹಲವು ಪ್ರಮುಖರ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ.

ಸಿದ್ದಿಕ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಮೊಕದ್ದಮೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.