ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಮಲಯಾಳ ಚಿತ್ರನಟ ಸಿದ್ದೀಕ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.
ಪಾಸ್‌ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸಿ ತನಿಖೆಗೆ ಸಹಕರಿಸುವಂತೆ ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮ ಅವರ ಪೀಠವು ಸಿದ್ದೀಕಿ ಅವರಿಗೆ ಸೂಚಿಸಿದೆ.
‘2016ರಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ದೂರು ನೀಡಿದ್ದು 8 ವರ್ಷಗಳ ಬಳಿಕ. 2018ರಲ್ಲಿ ಸಂತ್ರಸ್ತೆಯು ಆರೋಪಿ ಸೇರಿದಂತೆ 14 ಮಂದಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರೋಪ ಮಾಡಿದ್ದರು. ವಿಶೇಷವೆಂದರೆ, ಇಂತಹ ಪ್ರಕರಣಗಳ ಪರಿಶೀಲನೆಗಾಗಿ ಕೇರಳ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ಬಳಿಯೂ ದೂರು ನೀಡಿರುವ ಸಂತ್ರಸ್ತೆ ಹೋಗಿಲ್ಲ. ಹಾಗಾಗಿ ಕೆಲವು ಷರತ್ತುಗಳ ಆಧಾರದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುತ್ತಿದ್ದೇವೆ’ ಎಂದು ಪೀಠ ತಿಳಿಸಿದೆ.
ವಿಳಂಬವಾಗಿ ದೂರು ನೀಡಿರುವ ಬಗ್ಗೆ ಸಂತ್ರಸ್ತೆಯನ್ನು ಪ್ರಶ್ನಿಸಿದ ನ್ಯಾಯಾಲಯ, ‘ಫೇಸ್‌ಬುಕ್‌ನಲ್ಲಿ ಸಮಸ್ಯೆ ಹೇಳಿಕೊಳ್ಳಲು ಇದ್ದ ಧೈರ್ಯ, ಪೊಲೀಸರಿಗೆ ದೂರು ನೀಡಲು ಯಾಕಿರಲಿಲ್ಲ’ ಎಂದು ಪ್ರಶ್ನಿಸಿದೆ.
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಆಮಿಷವೊಡ್ಡಿ ಸಿದ್ದೀಕ್ ಅವರು 2016ರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಕಲಾವಿದೆಯೊಬ್ಬರು ದೂರು ನೀಡಿದ್ದರು. ಆ ಬೆನ್ನಲ್ಲೇ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಿರೀಕ್ಷಣಾ ಜಾಮೀನು ಕೋರಿ ಸಿದ್ದೀಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೆ.24ರಂದು ಹೈಕೋರ್ಟ್ ವಜಾಗೊಳಿಸಿತ್ತು. ಸಿದ್ದೀಕ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೆ.30ರಂದು ಮಧ್ಯಂತರ ರಕ್ಷಣೆ ನೀಡಿತ್ತು. ಮಧ್ಯಂತರ ರಕ್ಷಣೆ ಹಲವು ಬಾರಿ ವಿಸ್ತರಣೆಯಾಗಿತ್ತು. ಇದೀಗ ನಿರೀಕ್ಷಣಾ ಜಾಮೀನು ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.