ADVERTISEMENT

2002ರ ಗುಜರಾತ್‌ನ ಹಿಂಸಾಚಾರ ಪ್ರಕರಣ:15 ಅಪರಾಧಿಗಳಿಗೆ ಜಾಮೀನು

2002ರ ಗುಜರಾತ್‌ನ ಹಿಂಸಾಚಾರ ಪ್ರಕರಣ: ಸುಪ್ರೀಂ ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:59 IST
Last Updated 28 ಜನವರಿ 2020, 19:59 IST
.
.   

ನವದೆಹಲಿ: ಗುಜರಾತ್‌ನಲ್ಲಿ 2002ರಲ್ಲಿ ಗೋಧ್ರಾ ಘಟನೆಯ ನಂತರ ಸರ್ದಾರ್‌ಪುರ್‌ನಲ್ಲಿ ನಡೆದಿದ್ದ ಹಿಂಸಾ ಕೃತ್ಯಗಳಿಗೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 15 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

‘ಅಪರಾಧಿಗಳು ಮಧ್ಯಪ್ರದೇಶದ ಇಂದೋರ್‌ ಮತ್ತು ಜಬಲ್ಪುರಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ಅಲ್ಲಿ ಕೆಲ ಅಧ್ಯಾತ್ಮ ಮತ್ತು ಸಮಾಜ ಸೇವೆಯಲ್ಲಿ ತೊಡಗಬೇಕು’ ಎಂದೂ ಜಾಮೀನು ಮಂಜೂರು ಮಾಡಿದ ನ್ಯಾಯಪೀಠ ಅಪರಾಧಿಗಳಿಗೆ ಸೂಚಿಸಿತು. ಈ ಅಪರಾಧಿಗಳು ಗುಜರಾತ್‌ಗೆ ಪ್ರವೇಶಿಸದಂತೆ ನಿರ್ಬಂಧವನ್ನು ಹೇರಿದೆ.

2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಸರ್ದಾರ್‌ಪುರ್‌ನಲ್ಲಿ ನಡೆದಿದ್ದ ಹಿಂಸಾಚಾರ ಘಟನೆಗಳಲ್ಲಿ 50ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ದಹನ ಮಾಡಲಾಗಿತ್ತು. ‌

‘ಒಬ್ಬರು ಅಥವಾ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಇವರನ್ನು ದೋಷಿಗಳಾಗಿ ಗುರುತಿಸಲಾಗಿದೆ ಮತ್ತು ಈ ಹಿಂದೆ 150 ರಿಂದ 550 ದಿನದವರೆಗೂ ಪೆರೋಲ್‌ ಮೇಲೆ ಹೊರಗಿದ್ದಾಗ ಯಾವುದೇ ಅನುಚಿತ ವರ್ತನೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ’ ಎಂಬ ಅಂಶಗಳನ್ನು ನ್ಯಾಯಪೀಠ ಪ್ರಮುಖವಾಗಿ ಪರಿಗಣಿಸಿತು.

ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರಿದ್ದ ಪೀಠ, ‘ಅಪರಾಧಿಗಳನ್ನು ಎರಡು ಗುಂಪಾಗಿ ವಿಂಗಡಿಸಿ, ಒಂದು ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಉಳಿಯಬೇಕು, ಇನ್ನೊಂದು ಗುಂಪು ಜಬಲ್‌ಪುರಕ್ಕೆ ತೆರಳಬೇಕು’ ಎಂದು ಸೂಚಿಸಿತು.

ಸರ್ದಾರ್‌ಪುರ ಹಿಂಸಾತ್ಮಕ ಘಟನೆಗಳ ಅಪರಾಧಿಗಳಿಗೆ ಗುಜರಾತ್‌ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಪರವಾಗಿ ವಕೀಲರಾದ ಪಿ.ಎಸ್.ಪಾಟ್‌ವಾಲಿಯಾ, ಆಸ್ತಾ ಶರ್ಮಾ ವಾದಿಸಿದರು. ಗುಜರಾತ್‌ ಸರ್ಕಾರವನ್ನು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.

‘ಅಪರಾಧಿಗಳು ಜಾಮೀನು ಷರತ್ತು ಪಾಲಿಸುವುದನ್ನು ಗಮನಿಸಬೇಕು ಮತ್ತು ಬದುಕಲು ಅವರಿಗೆ ಸೂಕ್ತ ಕೆಲಸ ಪಡೆಯಲು ನೆರವಾಗಬೇಕು’ ಎಂದು ಇಂದೋರ್‌, ಜಬಲ್‌ಪುರದ ಕಾನೂನು ಸೇವಾ ಸಮಿತಿಗೆ ಸೂಚಿಸಿತು.

ಷರತ್ತು ಪಾಲನೆ ಬಗ್ಗೆ ಮೂರು ತಿಂಗಳ ನಂತರ ವರದಿ ನೀಡಬೇಕು ಎಂದೂ ಮಧ್ಯಪ್ರದೇಶ ಕಾನೂನು ಸೇವಾ ಸಮಿತಿಗೆ ಸೂಚಿಸಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್‌ ಈ ಹಿಂದೆ ಹಿಂದೆ 14 ಜನರನ್ನು ದೋಷಮುಕ್ತಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.