ನವದೆಹಲಿ: ಎಲ್ಗಾರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಹೋರಾಟಗಾರರಾದ ವೆರ್ನನ್ ಗೋನ್ಸಾಲ್ವೇಸ್ ಮತ್ತು ಅರುಣ್ ಫೆರೀರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಇಬ್ಬರೂ 5 ವರ್ಷಗಳಿಂದ ಪೊಲೀಸರ ವಶದಲ್ಲಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಜಾಮೀನು ಮಂಜೂರು ಮಾಡಿತು.
‘ಇಬ್ಬರೂ ಮಹಾರಾಷ್ಟ್ರದಿಂದ ಹೊರಗೆ ಹೋಗಬಾರದು, ಪೊಲೀಸರಿಗೆ ಪಾಸ್‌ಪೋರ್ಟ್ ಒಪ್ಪಿಸಬೇಕು. ಮೊಬೈಲ್ ಫೋನ್ ಬಳಸಬಹುದು ಮತ್ತು ಇಬ್ಬರ ವಿಳಾಸದ ಮಾಹಿತಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಿಳಿದಿರಬೇಕು‘ ಎಂದೂ ನಿರ್ದೇಶಿಸಿತು.
ಜಾಮೀನು ಅರ್ಜಿಯನ್ನು ಈ ಮುನ್ನ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣ ಡಿ. 31, 2017ರಲ್ಲಿ ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್ ಸಭೆಗೆ ಸಂಬಂಧಿಸಿದ್ದಾಗಿದೆ. ಪೊಲೀಸರ ಪ್ರಕಾರ, ಈ ಸಭೆಗೆ ಮಾವೋವಾದಿಗಳು ಹಣಕಾಸು ನೆರವು ನೀಡಿದ್ದರು. ಸಭೆಯಲ್ಲಿ ಮಾಡಲಾಗಿದ್ದ ಪ್ರಚೋದನಕಾರಿ ಭಾಷಣದಿಂದಾಗಿ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಮಾರನೆ ದಿನ ಹಿಂಸಾತ್ಮಕ ಕೃತ್ಯಗಳು ನಡೆದವು ಎಂದೂ ಪೊಲೀಸರು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.