ADVERTISEMENT

26ರವರೆಗೆ ಚಿದಂಬರಂ ಬಿಡುಗಡೆ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:00 IST
Last Updated 23 ಆಗಸ್ಟ್ 2019, 20:00 IST
ಚಿದಂಬರಂ
ಚಿದಂಬರಂ   

ನವದಹೆಲಿ: ಚಿದಂಬರಂ ಅವರನ್ನು ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ದೆಹಲಿಯ ಸಿಬಿಐ ನ್ಯಾಯಾಲಯ ಅವರನ್ನು ಸೋಮವಾರದ ವರೆಗೆ ಸಿಬಿಐ ಕಸ್ಟಡಿಗೆ ಗುರುವಾರ ಒಪ್ಪಿಸಿತ್ತು. ಹಾಗಾಗಿ, ಅವರು ಸೋಮವಾರದವರೆಗೆ ಸಿಬಿಐ ವಶದಲ್ಲಿಯೇ ಇರಬೇಕಾಗಿದೆ.

ಆದರೆ, ಹಣ ಅಕ್ರಮ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗುವುದರಿಂದ ಸೋಮವಾರದವರೆಗೆ ಸುಪ್ರೀಂ ಕೋರ್ಟ್‌ ರಕ್ಷಣೆ ನೀಡಿದೆ.

ADVERTISEMENT

ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಎ.ಎಸ್‌ ಬೋಪಣ್ಣ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು.ಸಿಬಿಐ ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಚಿದಂಬರಂ ಪರ ವಕೀಲರಾದ ಕಪಿಲ್‌ ಸಿಬಲ್ ಹಾಗೂ ಅಭಿಷೇಕ್‌ ಮನು ಸಿಂಘ್ವಿ ನಡುವೆ ನ್ಯಾಯಾಲಯದಲ್ಲಿ ಬಿಸಿ ಬಿಸಿ ವಾದ–ಪ್ರತಿವಾದ ನಡೆಯಿತು.

ಇ.ಡಿ ಬಂಧನದಿಂದ ಚಿದಂಬರಂ ಅವರಿಗೆ ರಕ್ಷಣೆ ಕೊಡುವುದನ್ನು ಮಹ್ತಾ ಅವರು ಬಲವಾಗಿ ವಿರೋಧಿಸಿದರು.

ಸುಪ್ರೀಂ ಕೋರ್ಟ್‌ಗೆ ಚಿದಂಬರಂ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ತಮಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ಇದೇ 20ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಒಂದು ಅರ್ಜಿ. ಇನ್ನೊಂದು ಇ.ಡಿ ಬಂಧನದಿಂದ ರಕ್ಷಣೆ ಕೋರಿದ್ದ ಅರ್ಜಿ.

ಹೈಕೋರ್ಟ್‌, ಸುಪ್ರೀಂ ವಿರುದ್ಧ ಅತೃಪ್ತಿ
ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ತಮ್ಮನ್ನು ಪ್ರಕರಣದ ‘ಸೂತ್ರಧಾರ’ ಆಗಿರಬಹುದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಸಿಬಿಐ ಮತ್ತು ಇ.ಡಿ. ನೀಡಿದ್ದ ದೃಢೀಕರಿಸದ ಟಿಪ್ಪಣಿಯನ್ನು ಹಾಗೆಯೇ ತೀರ್ಪಿಗೆ ಸೇರಿಸಿಕೊಳ್ಳಲಾಗಿದೆ ಎಂದು ಚಿದಂಬರಂ ಆರೋಪ ಮಾಡಿದ್ದಾರೆ.

ಹಾಗೆಯೇ, ಇದೇ 20ರಂದು ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳದೆ ತಮ್ಮ ಕಾನೂನು ಅವಕಾಶಗಳನ್ನು ಸುಪ್ರೀಂ ಕೋರ್ಟ್‌ ಕಮರಿಸಿತು ಎಂದೂ ಅವರು ಹೇಳಿದ್ದಾರೆ.

21ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳದೇ ಇರುವ ಮೂಲಕ ಸಂವಿಧಾನದ 21ನೇ ವಿಧಿ ಅಡಿ ಇರುವ ತಮ್ಮ ಕಕ್ಷಿದಾರರ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಸಿಬಲ್‌ ಮತ್ತು ಸಿಂಘ್ವಿ ವಾದಿಸಿದರು.

ಆದರೆ, ಮೆಹ್ತಾ ಅವರು ಹೈಕೋರ್ಟ್‌ ತೀರ್ಪನ್ನು ಸಮರ್ಥಿಸಿಕೊಂಡರು. ‘ಸಾಕ್ಷ್ಯಗಳನ್ನು ನಾವು ಅವರ ಮುಂದೆ ಇರಿಸಬೇಕಿದೆ. ಮಾನಸಿಕವಾಗಿ ಗಟ್ಟಿ ಇರುವ ಕೆಲವು ರೀತಿಯ ಜನರು, ನಿರೀಕ್ಷಣಾ ಜಾಮೀನಿನ ರಕ್ಷಣೆಯಲ್ಲಿದ್ದರೆ ತನಿಖೆಗೆ ಯಾವತ್ತೂ ಸಹಕರಿಸುವುದಿಲ್ಲ’ ಎಂದು ಅವರು ವಾದಿಸಿದರು.

ಹೈಕೋರ್ಟ್‌ನ ಆದೇಶವನ್ನು ಚಿದಂಬರಂ ವಕೀಲರು ಓದಿದರು. ಇದು ಅಂತಿಮ ತೀರ್ಪಿನ ರೀತಿಯಲ್ಲಿಯೇ ಇದೆ ಎಂದರು.

ತನಿಖಾ ಸಂಸ್ಥೆಗಳು ಯಾವುದೇ ಪ್ರಮಾಣಪತ್ರ ಸಲ್ಲಿಸಿಲ್ಲ. ಆದರೆ, ಈ ಸಂಸ್ಥೆಗಳು ಕೊಟ್ಟಿದ್ದ ಟಿಪ್ಪಣಿಗಳನ್ನು ತೀರ್ಪಿಗೆ ಸೇರಿಸಿಕೊಳ್ಳಲಾಗಿದೆ. ಟಿಪ್ಪಣಿಯಲ್ಲಿದ್ದ ಕೆಲವು ವಿಶೇಷಣಗಳು ಮತ್ತು ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಅವರು ವಾದಿಸಿದರು.

ಆರ್ಥಿಕ ಅಪರಾಧಿಗಳು ಮತ್ತು ದೊಡ್ಡ ಮಟ್ಟದ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಅವಕಾಶವನ್ನು ರದ್ದುಪಡಿಸಬೇಕು ಎಂಬ ಶಿಫಾರಸು ಕೂಡ ಹೈಕೋರ್ಟ್‌ ಆದೇಶದಲ್ಲಿ ಇದೆ. ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣದ ಉಲ್ಲೇಖವೂ ಇದೆ. ಆದರೆ, ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೂ ಆ ಪ್ರಕರಣಕ್ಕೂ ಸಂಬಂಧವೇ ಇಲ್ಲಎಂಬುದನ್ನು ಸಿಂಘ್ವಿ ಸೂಚಿಸಿದರು.

5 ರಾಷ್ಟ್ರಗಳಿಂದ ಮಾಹಿತಿ ಕೋರಿದ ಸಿಬಿಐ
ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಬೇಗನೆ ಆರೋಪಪಟ್ಟಿ ಸಲ್ಲಿಸಲು ಸಿಬಿಐ ಮುಂದಾಗಿದೆ. ಐಎನ್‌ಎಕ್ಸ್‌ ಮೀಡಿಯಾಕ್ಕೆ ಹಣ ಸಂದಾಯವಾದ ಬಗೆಯನ್ನು ಪತ್ತೆ ಮಾಡಲು ಮುಂದಾಗಿದೆ. ಅದಕ್ಕಾಗಿ ಮಾಹಿತಿ ನೀಡುವಂತೆ ಬ್ರಿಟನ್‌, ಮಾರಿಷಸ್‌, ಸ್ವಿಟ್ಜರ್‌ಲೆಂಡ್‌, ಬರ್ಮುಡಾ ಮತ್ತು ಸಿಂಗಪುರಕ್ಕೆ ಕೋರಿಕೆ ಕಳುಹಿಸಿದೆ.

ಆರೋಪಪಟ್ಟಿ ಸಲ್ಲಿಕೆಗೆ ಈ ಮಾಹಿತಿ ಅತ್ಯಗತ್ಯ. ಹಾಗಾಗಿ, ಈ ವಿನಂತಿಗಳನ್ನು ಕಳುಹಿಸಲಾಗಿದೆ.

ಬಂಧನದಿಂದ ರಕ್ಷಣೆ: ಚಿದಂಬರಂ ಮತ್ತು ಅವರ ಮಗ ಕಾರ್ತಿಗೆ ಏರ್‌ಸೆಲ್‌ ಮ್ಯಾಕ್ಸಿಸ್‌ ಪ್ರಕರಣದಲ್ಲಿ ಬಂಧನದಿಂದ ನೀಡಿದ್ದ ರಕ್ಷಣೆಯನ್ನು ಸೆ. 3ರವರೆಗೆ ದೆಹಲಿಯ ನ್ಯಾಯಾಲಯ ವಿಸ್ತರಿಸಿದೆ. ಈ ಇಬ್ಬರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮತ್ತೆ ಮತ್ತೆ ಮುಂದೂಡುವಂತೆ ಕೋರಿದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.