ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ 16 ಶಾಸಕರ ಅನರ್ಹತೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಅಮಾನತಿನಲ್ಲಿ ಇರಿಸಿದೆ. ಅನರ್ಹತೆಗೆ ಸಂಬಂಧಿಸಿ ಡೆಪ್ಯುಟಿ ಸ್ಪೀಕರ್ ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಜುಲೈ 12ರವರೆಗೆ ಸಮಯಾವಕಾಶ ಕೊಟ್ಟಿದೆ. ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಶಾಸಕರಿಗೆ ಉಪಸ್ಪೀಕರ್ ಸೋಮವಾರ ಸಂಜೆ 5.30ರವರೆಗೆ ಸಮಯ ಕೊಟ್ಟಿದ್ದರು.
ವಾದ–ಪ್ರತಿವಾದಗಳನ್ನು ಆಲಿಸಿ ಒಂದು ನಿರ್ಧಾರಕ್ಕೆ ಬರುವುದಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರು ಪೀಠವು ಹೇಳಿದೆ.
‘ಅನರ್ಹತೆ ವಿಚಾರದಲ್ಲಿ ಕ್ರಮ
ಕೈಗೊಳ್ಳಲು ಉಪಸ್ಪೀಕರ್‌ಗೆ ಅಧಿಕಾರ ಇದೆಯೇ ಎಂಬುದನ್ನು ಪರಿಶೀಲಿಸ ಬೇಕಿದೆ’ ಎಂದು ಪೀಠವು ಹೇಳಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶವು, ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿರುವ ಬಂಡಾಯ ಶಾಸಕರಿಗೆ ನಿರಾಳ ತಂದಿದೆ.
ಉಪಸ್ಪೀಕರ್ ಅವರು ತಮ್ಮದೇ ಪ್ರಕರಣದಲ್ಲಿ ನ್ಯಾಯಾಧೀಶರಾಗಲು ಮತ್ತು ಅವರನ್ನು ವಜಾ ಮಾಡಬೇಕು ಎಂಬ ಬೇಡಿಕೆಯು ಮೌಲಿಕವಲ್ಲ ಎನ್ನಲು ಸಾಧ್ಯವೇ ಎಂದು ಪೀಠವು ಪ್ರಶ್ನಿಸಿದೆ.
ಉಪಸ್ಪೀಕರ್ ಅವರ ಬಗ್ಗೆ ಅವಿಶ್ವಾಸ ನೋಟಿಸ್ ಅನ್ನು ಬಂಡಾಯ ಶಾಸಕರು ನೀಡಿದ್ದಾರೆ. ಈ ವಿಚಾರವು ತೀರ್ಮಾನವಾಗುವ ಮುನ್ನವೇ ಅನರ್ಹತೆ ಪ್ರಕ್ರಿಯೆಯನ್ನು ನಡೆಸಬಹುದೇ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಉಪಸ್ಪೀಕರ್‌ಗೆ ಪೀಠ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.