ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಸಿಬಿಐನಿಂದ ಚಿದಂಬರಂ ಸೆರೆ

ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಒಪ್ಪದ ಸುಪ್ರೀಂ ಕೋರ್ಟ್‌

ಪಿಟಿಐ
Published 21 ಆಗಸ್ಟ್ 2019, 20:18 IST
Last Updated 21 ಆಗಸ್ಟ್ 2019, 20:18 IST
ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಕರೆದೊಯ್ದರು
ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಕರೆದೊಯ್ದರು   

ನವದೆಹಲಿ:ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬುಧವಾರ ರಾತ್ರಿ 9.45ಕ್ಕೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರವಿಡೀ ನಡೆದ ನಾಟಕೀಯ ಬೆಳವಣಿಗೆ ನಂತರ ಈ ಬಂಧನ ನಡೆಯಿತು.

ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿ, ಅವರ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಿತು. ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್‌ ಮಂಗಳವಾರ ನಿರಾಕರಿಸಿತ್ತು. ಅದಾದ ಬಳಿಕ ಚಿದಂಬರಂ ಅವರನ್ನು ಬಂಧಿಸುವ ಪ್ರಯತ್ನವನ್ನು ಸಿಬಿಐ ಆರಂಭಿಸಿತ್ತು. ಆದರೆ, ಅವರು ಯಾರ ಕೈಗೂ ಸಿಕ್ಕಿರಲಿಲ್ಲ.

ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬಳಿಕ ಬುಧವಾರ ಸಂಜೆ ಅವರು ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಅದಾಗಿ ಸ್ವಲ್ಪ ಹೊತ್ತಿನ ಬಳಿಕ ಅವರ ಮನೆಯಲ್ಲಿಯೇ ಚಿದಂಬರಂ ಅವರನ್ನು ಬಂಧಿಸಿದರು.

ADVERTISEMENT

ಚಿದಂಬರಂ ಅವರನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದೊಯ್ಯುವಾಗ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅವರನ್ನು ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕೆಲವರು ಹಾರಿದರು.

ಸಿಬಿಐ ಕೇಂದ್ರ ಕಚೇರಿಯ ಅತಿಥಿಗೃಹದಲ್ಲಿ ಬುಧವಾರ ರಾತ್ರಿ ಅವರನ್ನು ಇರಿಸಲಾಗಿದೆ. ಅಲ್ಲಿಂದ ಗುರುವಾರ ಬೆಳಿಗ್ಗೆ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅವರನ್ನು ವಶಕ್ಕೆ ನೀಡುವಂತೆ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೊದಲು ಚಿದಂಬರಂ ಅವರು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಕಾಯುವ ಸಾಧ್ಯತೆ ಇದೆ.

ತಮ್ಮ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಬಂಧನ ಸಾಧ್ಯತೆ ಇಲ್ಲ ಎಂದು ಚಿದಂಬರಂ ಭಾವಿಸಿದ್ದರು. ಆದರೆ, ಅವರು ಮಾಧ್ಯಮಗೋಷ್ಠಿಯಲ್ಲಿ ಕಾಣಿಸಿಕೊಂಡ ಬಳಿಕ ಸಮಯ ಕಳೆಯದೆಯೇ ಸಿಬಿಐ ಅಧಿಕಾರಿಗಳು ಅವರ ಹಿಂದೆ ಬಿದ್ದರು. ಸುಪ್ರೀಂ ಕೋರ್ಟ್‌ ಬಂಧನದಿಂದ ತಕ್ಷಣ ರಕ್ಷಣೆ ನೀಡುವುದಿಲ್ಲ ಎಂಬುದು ಬುಧವಾರ ಸಂಜೆ ಅವರಿಗೆ ನಿಚ್ಚಳವಾಗಿತ್ತು. ಹಾಗಾಗಿ, ಇಡೀ ಪ್ರಕರಣವನ್ನು ರಾಜಕೀಯವಾಗಿಯೇ ಎದುರಿಸುವ ದೃಷ್ಟಿಯಿಂದ ಅವರು ಮಾಧ್ಯಮಗೋಷ್ಠಿ ನಡೆಸಿದರು.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಚಿದಂಬರಂ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷದ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್‌, ಕೆ.ಸಿ. ವೇಣುಗೋಪಾಲ್‌, ಕಪಿಲ್‌ ಸಿಬಲ್‌, ಸಲ್ಮಾನ್‌ ಖುರ್ಷಿದ್‌ ಮುಂತಾದವರು ಮಾಧ್ಯಮಗೋಷ್ಠಿಯಲ್ಲಿಯೂ ಅವರ ಜತೆಗಿದ್ದರು.

ಮಂಗಳವಾರ ರಾತ್ರಿಯಿಂದಲೇ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ ಚಿದಂಬರಂ ಅವರು ಯಾರ ಕೈಗೂ ಸಿಗುತ್ತಿಲ್ಲ ಎಂದು ಹೇಳಲಾಗಿತ್ತು. ಆದರೆ, ಬುಧವಾರ ಸಂಜೆ ಅವರು ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.

‘ನಾನೆಲ್ಲೂ ಓಡಿ ಹೋಗಿಲ್ಲ, ನಾನು ತಲೆಮರೆಸಿಕೊಂಡಿದ್ದೇನೆ ಎಂಬ ವರದಿಗಳನ್ನು ನೋಡಿ ಆಘಾತವಾಗಿದೆ’ ಎಂದರು. ಕಾಂಗ್ರೆಸ್‌ ಕಚೇರಿಯಿಂದ ನಿರ್ಗಮಿಸಿದ ಅವರು, ನಂತರ ಮನೆಗೆ ಹೋದರು. ಸಿಬಿಐ ಅಧಿಕಾರಿಗಳು ಗೇಟು ಹಾರಿ ಮನೆಯೊಳಗೆ ಹೋಗಿ ಚಿದಂಬರಂ ಅವರನ್ನು ತನಿಖೆಗೆ ಒಳಪಡಿಸಿ, ಬಳಿಕ ಬಂಧಿಸಿದರು.

ನಿರೀಕ್ಷಣಾ ಜಾಮೀನಿಗೆ ಹರಸಾಹಸ

ಅರ್ಜಿಯು ಬುಧವಾರವೇ ವಿಚಾರಣೆಗೆ ಬರುವಂತೆ ಮಾಡಲು ಚಿದಂಬರಂ ಪರ ವಕೀಲರು ಎರಡು ಬಾರಿ ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ. ‘ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ಅವರ ಅರ್ಜಿಯನ್ನು ವಿಚಾರಣೆಗಾಗಿ ಪಟ್ಟಿ ಮಾಡುವವರೆಗೂ ಅವರಿಗೆ ಬಂಧನದಿಂದ ರಕ್ಷಣೆ ನೀಡಲಾಗದು’ ಎಂದು ಕೋರ್ಟ್‌ ಹೇಳಿತು.

ಬುಧವಾರ ಬೆಳಿಗ್ಗೆ ಅರ್ಜಿಯನ್ನು ಪೀಠದ ಮುಂದೆ ತರಲು ವಿಫಲರಾದ ಚಿದಂಬರಂ ಪರ ವಕೀಲ ಕಪಿಲ್‌ ಸಿಬಲ್‌ ಅವರು ಮಧ್ಯಾಹ್ನ ಪುನಃ ಪ್ರಯತ್ನ ನಡೆಸಿದರು. ಆದರೆ ಅರ್ಜಿಯು ನಿಯಮಾನುಸಾರವಾಗಿ ಪೀಠದ ಮುಂದೆ ಬರುವವರೆಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ ಹೇಳಿತು.

ಬುಧವಾರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎಂಬುದನ್ನು ಮನಗಂಡ ಸಿಬಲ್‌, ‘ಮೌಖಿಕ ಆದೇಶದ ಮೂಲಕ ಚಿದಂಬರಂ ಅವರಿಗೆ ಬಂಧನದಿಂದ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿಕೊಂಡರು. ಆದಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಿರೋಧ ವ್ಯಕ್ತಪಡಿಸಿದರು.

27 ತಾಸು ನಾಪತ್ತೆ

ಮಂಗಳವಾರ ಸಂಜೆ ಸುಪ್ರೀಂ ಕೋರ್ಟ್‌ನಿಂದ ಹೊರ ಹೋಗಿದ್ದ ಚಿದಂಬರಂ ಅವರು ಮುಂದಿನ 27 ತಾಸು ಯಾರ ಕೈಗೂ ಸಿಕ್ಕಿರಲಿಲ್ಲ. ಬುಧವಾರ ರಾತ್ರಿ 8.15ಕ್ಕೆ ಅವರು ಕಾಂಗ್ರೆಸ್‌ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ವಕೀಲರ ಜತೆ ಸಮಾಲೋಚನೆ ನಡೆಸುತ್ತಿದ್ದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದೆ ಎಂದು ಅಲ್ಲಿ ಹೇಳಿದರು.

‘ನಾನು ಕಾನೂನನ್ನು ಗೌರವಿಸುತ್ತೇನೆ. ತನಿಖಾ ಸಂಸ್ಥೆಗಳು ಕಾನೂನನ್ನು ತಾರತಮ್ಯದಿಂದ ಅನ್ವಯ ಮಾಡಿದರೂ ಪರವಾಗಿಲ್ಲ’ ಎಂದು ಹೇಳುವ ಮೂಲಕ ತಾವು ಬಂಧನದಿಂದ ತಪ್ಪಿಸಿಕೊಳ್ಳುತ್ತಿಲ್ಲ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಹಾಜರ್‌

ದೆಹಲಿ ಹೈಕೋರ್ಟ್‌ನ ತೀರ್ಪಿನ ಬಳಿಕ ಪಿ. ಚಿದಂಬರಂ ಅವರು ನಾಪತ್ತೆಯಾಗಿದ್ದಾರೆ ಎಂದು ದಟ್ಟವಾದ ವದಂತಿ ಹಬ್ಬಿತ್ತು. ಅವರು ದೇಶಬಿಟ್ಟು ಹೋಗುವುದನ್ನು ತಡೆಯುವ ಸಲುವಾಗಿ ಸಿಬಿಐ ಅವರ ವಿರುದ್ಧ ಬುಧವಾರ ಲುಕೌಟ್‌ ನೋಟಿಸ್‌ ಜಾರಿ ಮಾಡಿದೆ. ಆದರೆ 24 ಗಂಟೆಗಳ ಬಳಿಕ, ಬುಧವಾರ ಸಂಜೆಯ ವೇಳೆಗೆ ಅವರು ಕಾಂಗ್ರೆಸ್‌ ಕಚೇರಿಯಲ್ಲಿ ಕಾಣಿಸಿಕೊಂಡರಲ್ಲದೆ ಮಾಧ್ಯಮಗೋಷ್ಠಿಯನ್ನೂ ನಡೆಸಿದರು.

‘ಕಳೆದ 24 ಗಂಟೆಗಳಲ್ಲಿ ನಡೆದ ಬೆಳವಣಿಗೆಗಳು ಕೆಲವರಲ್ಲಿ ಆತಂಕ ಮೂಡಿಸಿದ್ದರೆ, ಅನೇಕರಲ್ಲಿ ಗೊಂದಲ ಉಂಟುಮಾಡಿವೆ. ಐಎನ್‌ಎಕ್ಸ್‌ ಹಗರಣದಲ್ಲಿ ನಾನಾಗಲಿ ನನ್ನ ಕುಟುಂಬದ ಯಾವುದೇ ಸದಸ್ಯರಾಗಲಿ ಆರೋಪಿಯಲ್ಲ. ಸಿಬಿಐ ಅಗಲಿ, ಜಾರಿ ನಿರ್ದೇಶನಾಲಯವಾಗಲಿ ನನ್ನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಿಲ್ಲ. ನನ್ನ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿಲ್ಲ. ನಾನು ಬಹುದೊಡ್ಡ ಅಪರಾಧ ಮಾಡಿದ್ದೇನೆ ಎಂಬಂತೆ ಸುಳ್ಳಿನ ಸೃಷ್ಟಿಕರ್ತರು ವದಂತಿ ಹಬ್ಬಿಸುತ್ತಿದ್ದಾರೆ’ ಎಂದು ಚಿದಂಬರಂ ಹೇಳಿದರು.

‘ನಾನು ಕಾನೂನನ್ನು ಗೌರವಿಸುತ್ತೇನೆ, ತನಿಖಾ ಸಂಸ್ಥೆಗಳೂ ಹಾಗೆಯೇ ಮಾಡುತ್ತವೆ ಎಂದು ಭಾವಿಸಿದ್ದೇನೆ’ ಎಂದ ಅವರು, ಮಾಧ್ಯಮದವರ ಯಾವುದೇ ಪ್ರಶ್ನೆಗೆ ಉತ್ತರಿಸದೆ ಕಾಂಗ್ರೆಸ್‌ ಕಚೇರಿಯಿಂದ ನಿರ್ಗಮಿಸಿದರು.

ಚಿದಂಬರಂ ಅವರು ಕಾಂಗ್ರೆಸ್‌ ಕಚೇರಿಯೊಳಗೆ ಮಾಧ್ಯಮಗೋಷ್ಠಿ ನಡೆಸುತ್ತಿದ್ದರೆ ಹೊರಗಡೆ ಸಿಬಿಐ ಅಧಿಕಾರಿಗಳ ತಂಡವೊಂದು ಅವರಿಗಾಗಿ ಕಾಯುತ್ತಿತ್ತು. ಆದರೆ ಅವರನ್ನು ಬಂಧಿಸಲು ಆ ತಂಡ ವಿಫಲವಾಯಿತು.

ಬೆನ್ನುಬಿದ್ದ ಸಿಬಿಐ

ಪ್ರಕರಣದ ಮುಖ್ಯ ಸೂತ್ರಧಾರ ಚಿದಂಬರಂ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆರ್ಥಿಕ ಅಪರಾಧಗಳನ್ನು ‘ಉಕ್ಕಿನ ಕೈ’ಗಳಿಂದ ನಿಭಾಯಿಸಬೇಕು ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿತ್ತು. ಅದಾದ ಬಳಿಕ, ಸಿಬಿಐ ಅಧಿಕಾರಿಗಳು ಚಿದಂಬರಂ ಹಿಂದೆ ಬಿದ್ದಿದ್ದರು.

ಆದರೆ, ಕಾಂಗ್ರೆಸ್‌ ಕಚೇರಿಯಲ್ಲಿ ಕಾಣಿಸಿಕೊಳ್ಳುವವರೆಗೆ ಅವರನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಮಾಧ್ಯಮಗೋಷ್ಠಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಅಲ್ಲಿಗೆ ಧಾವಿಸಿದರು. ಅಷ್ಟು ಹೊತ್ತಿಗೆ ಚಿದಂಬರಂ ಮನೆಗೆ ಹೋಗಿದ್ದರು. ಮನೆಯ ಗೋಡೆ ಹತ್ತಿ ಒಳಗೆ ಹೋದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದರು.

*ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಅಡಿಪಾಯ ಎಂಬುದು ನನ್ನ ನಂಬಿಕೆ. ಜೀವ ಮತ್ತು ಸ್ವಾತಂತ್ರ್ಯ ಎರಡರಲ್ಲಿ ನಾನು ಸ್ವಾತಂತ್ರ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ.

ಬಂಧನಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಚಿದಂಬರಂ ಹೇಳಿಕೆ.

ಚಿದಂಬರಂ ಅವರ ನಿವಾಸದ ಎದುರು ಜಮಾಯಿಸಿದ್ದ ಅವರ ಬೆಂಬಲಿಗರನ್ನು ನಿಯಂತ್ರಿಸಲು ಅಧಿಕಾರಿಗಳು ಯತ್ನಿಸಿದರು

ದಿನವಿಡೀ ಕಣ್ಣಾಮುಚ್ಚಾಲೆ ಪ್ರಮುಖ ಬೆಳವಣಿಗೆ

ಮಂಗಳವಾರ

ಮಧ್ಯಾಹ್ನ3:20: ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

4:05: ಹೈಕೋರ್ಟ್ ಆದೇಶ ಪ್ರಶ್ನಿಸಿ ಚಿದಂಬರಂ ಪರ ವಕೀಲರಿಂದ ಸುಪ್ರೀಂ ಕೋರ್ಟ್‌ ಮೊರೆ; ನ್ಯಾಯಮೂರ್ತಿ ಎನ್‌.ವಿ. ರಮಣ ಪೀಠದಲ್ಲಿ ವಿಚಾರಣೆಗೆ ನಿಗದಿ

ಬುಧವಾರ

ಬೆಳಿಗ್ಗೆ 10:30: ಯಾವುದೇ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ; ಸಿಜೆಐ ಗೊಗೊಯಿ ಎದುರು ವಿಷಯ ಪ್ರಸ್ತಾಪಿಸಲು ಚಿದಂಬರಂ ಪರ ವಕೀಲರಿಗೆ ಸೂಚನೆ

ಮಧ್ಯಾಹ್ನ 2:00: ನ್ಯಾಯಮೂರ್ತಿ ರಮಣ ಅವರ ಎದುರು ಹಾಜರಾದ ವಕೀಲರು. ವಿಚಾರಣೆ ನಡೆಸದೇ ಆದೇಶ ನೀಡಲು ಕೋರ್ಟ್ ನಕಾರ

3:30: ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಜೆಐ ಪೀಠದೆದುರು ವಕೀಲರು ಹಾಜರು

3:55: ಚಿದಂಬರಂ ಪರ ವಕೀಲರ ವಾದ ಕೇಳಿಸಿಕೊಳ್ಳದೇ ವಿಚಾರಣೆ ಮುಗಿಸಿದ ಸಿಜೆಐ ನೇತೃತ್ವದ ಪೀಠ

4:00: ಚಿದಂಬರಂ ಪ್ರಕರಣವನ್ನು ಶುಕ್ರವಾರಕ್ಕೆ ನಿಗದಿಪಡಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್

8:15: ನಾಟಕೀಯವಾಗಿ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಚಿದಂಬರಂ ಪ್ರತ್ಯಕ್ಷ್ಯ; ತಾವು ನಿರಪರಾಧಿ ಎಂದು ಮಾಧ್ಯಮದ ಎದುರು ಹೇಳಿಕೆ

8:45: ತಮ್ಮ ಜೋರ್‌ಬಾಗ್ ನಿವಾಸ ತಲುಪಿದ ಚಿದಂಬರಂ

8:50: ಚಿದಂಬರಂ ನಿವಾಸವನ್ನು ತಲುಪಿದ ಸಿಬಿಐ ಅಧಿಕಾರಿಗಳು

9:45: ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು

‘ಚಕ್ರ ಒಂದು ಸುತ್ತು ಉರುಳಿದೆ’

‘ಶಂಕಿತ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು 2010ರಲ್ಲಿ ಬಂಧಿಸಿದ್ದಾಗ ಪಿ.ಚಿದಂಬರಂ ಗೃಹಸಚಿವರಾಗಿದ್ದರು. 9 ವರ್ಷವಾಗಿದೆಯಷ್ಟೆ. ಈಗ ಶಾ ಗೃಹ ಸಚಿವ, ಚಿದಂಬರಂ ಬಂಧನ. ಚಕ್ರ ಒಂದು ಸುತ್ತು ಉರುಳಿದೆ. ಇದು ಕಾನೂನಿನ ಶಕ್ತಿಯೇ ಅಥವಾ ದ್ವೇಷ ರಾಜಕಾರಣವೇ? ನೀವೇ ನಿರ್ಧರಿಸಿ’ ಎಂದು ಪತ್ರಕರ್ತ ರಾಜದೀಪ್ ಸರದೇಸಾಯಿ ಟ್ವೀಟ್ ಮಾಡಿದ್ದಾರೆ.

* ಇವನ್ನು ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.