ADVERTISEMENT

‘ತುರ್ತು ಪರಿಸ್ಥಿತಿ ವೇಳೆಯ ಸಂಸತ್‌ನ ನಿರ್ಧಾರಗಳೆಲ್ಲ ಅನೂರ್ಜಿತ ಎನ್ನಲಾಗದು’

ಸಂವಿಧಾನ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳ ಸೇರ್ಪಡೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ

ಪಿಟಿಐ
Published 22 ನವೆಂಬರ್ 2024, 16:32 IST
Last Updated 22 ನವೆಂಬರ್ 2024, 16:32 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಸೇರಿದಂತೆ ಸಂಸತ್‌ ಕೈಗೊಂಡಿರುವ ನಿರ್ಧಾರಗಳೆಲ್ಲವೂ ಅನೂರ್ಜಿತ ಎಂಬುದಾಗಿ ತಾನು ಹೇಳುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

‘1976ರಲ್ಲಿ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಹಾಗೂ ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಲಾಯಿತು. ಸಂಸತ್‌ನ ಈ ನಿರ್ಧಾರವನ್ನು ನ್ಯಾಯಾಂಗವು ವಿಮರ್ಶೆಗೆ ಒಳಪಡಿಸಿದೆ. ಈ ಪದಗಳ ಸೇರ್ಪಡೆಯೂ ಸೇರಿದಂತೆ ತುರ್ತು ಪರಿಸ್ಥಿತಿ ವೇಳೆ ಸಂಸತ್‌ ಕೈಗೊಂಡ ಎಲ್ಲ ನಿರ್ಧಾರಗಳು ಅನೂರ್ಜಿತ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯಕುಮಾರ್‌ ಅವರಿದ್ದ ನ್ಯಾಯಪೀಠ ಹೇಳಿದೆ.

ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಹಾಗೂ ‘ಸಮಗ್ರತೆ’ ಎಂಬ ಪದಗಳನ್ನು ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.  

ADVERTISEMENT

ನ್ಯಾಯಪೀಠವು, ನ.25ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿತು.

ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣುಶಂಕರ ಜೈನ್ ಹಾಗೂ ಇತರರು ಈ ಕುರಿತು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ, ಈ ಕುರಿತ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವಹಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಪೀಠ ತಿರಸ್ಕರಿಸಿತು. 

1976ರಲ್ಲಿ ತಿದ್ದುಪಡಿ

ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಈ ಪದಗಳನ್ನು ಸಂವಿಧಾನ ಪೀಠಿಕೆಯಲ್ಲಿ ಸೇರ್ಪಡೆ ಮಾಡಿದ್ದರು.  ಈ ತಿದ್ದುಪಡಿಯಿಂದಾಗಿ ಪೀಠಿಕೆಯಲ್ಲಿದ್ದ ‘ಸಾರ್ವಭೌಮ ಪ್ರಜಾಸತ್ತಾತ್ಮಕ ಗಣತಂತ್ರ’ ಎಂಬ ವಿವರಣೆಯು ‘ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ’ ಎಂಬುದಾಗಿ ಬದಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.