ನವದೆಹಲಿ: ರಫೇಲ್ ತೀರ್ಪನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ‘ಚೌಕಿದಾರ್ ಚೋರ್ ಹೇ–ಕಾವಲುಗಾರ ಕಳ್ಳ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟಿಸ್ ನೀಡಿತು. ಅಲ್ಲದೆ, ವಿಚಾರಣೆಯನ್ನು ಇದೇ 30ಕ್ಕೆ ನಿಗದಿ ಮಾಡಿತು. ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯೂ ಇದೇ ದಿನ ನಿಗದಿಯಾಗಿದೆ.ಅದರ ಜತೆ ಜತೆಗೇ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಚಾರಣೆ ಮಾಡುವುದಾಗಿ ಕೋರ್ಟ್ ಹೇಳಿತು.
‘ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ನೀಡಲು ಅರ್ಹವಾದ ಪ್ರಕರಣ ಇದೆಂದು ಕೋರ್ಟ್ ಪರಿಗಣಿಸಿದೆ,’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ರಕ್ಷಣಾ ಇಲಾಖೆಯಿಂದ ಸೋರಿಕೆಯಾದರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಚಾರಣೆಗೆ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಏ.10ರಂದು ತೀರ್ಪು ನೀಡಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ ‘ ಚೌಕಿದಾರ ಚೋರನೆಂದು ನ್ಯಾಯಾಲಯವೂ ಹೇಳಿದೆ,’ ಎಂದು ಹೇಳಿದ್ದರು. ನ್ಯಾಯಾಲಯದ ತೀರ್ಪನ್ನು ರಾಹುಲ್ ಗಾಂಧಿ ತಪ್ಪಾಗಿ ಬಿಂಬಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಸ್ಪಷ್ಟನೆ ನೀಡುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು.
ಇದೇ ಹಿನ್ನೆಲೆಯಲ್ಲಿ ಸೋಮವಾರ ವಕೀಲ ಅಭಿಷೇಕ್ ಮನು ಸಿಂಗ್ವಿ ಅವರ ಮೂಲಕ ಕೋರ್ಟ್‌ಗೆ 26 ಪುಟಗಳ ಪ್ರಮಾಣ ಪತ್ರ ಸಲ್ಲಿಸಿದ್ದ ರಾಹುಲ್ ಗಾಂಧಿ ‘ಚುನಾವಣಾ ಪ್ರಚಾರದ ಭರದಲ್ಲಿ ಈ ಹೇಳಿಕೆ ನೀಡಲಾಗಿದೆ. ಅದು ಉದ್ದೇಶಪೂರ್ವಕ ಅಲ್ಲ. ಯಾವುದೇ ರೀತಿಯಲ್ಲಿಯೂ ನ್ಯಾಯಾಲಯದ ಘನತೆಯನ್ನು ಕುಗ್ಗಿಸುವ ಉದ್ದೇಶ ಇರಲಿಲ್ಲ,’ ಎಂದು ಹೇಳಿದ್ದರು.
ಖುದ್ದು ಹಾಜರಿಗೆ ವಿನಾಯಿತಿ
ರಾಹುಲ್ ಅವರು ಖುದ್ದಾಗಿ ಹಾಜರಾಗುವುದರಿಂದ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿದೆ.ರಾಹುಲ್ ಅವರು ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಮುಕುಲ್ ರೋಹಟಗಿ ಮಾಧ್ಯಮದ ಮುಂದೆ ಹೇಳಿದ್ದರು. ಆದರೆ, ಆದೇಶ ನೀಡಿದ ಕೆಲ ತಾಸಿನ ಬಳಿಕ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ರಾಹುಲ್ ಖುದ್ದಾಗಿ ಹಾಜರಾಗಬೇಕಾಗಿಲ್ಲ ಎಂದು ಅದರಲ್ಲಿ ಹೇಳಲಾಗಿದೆ.
ಇದನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.