ನವದೆಹಲಿ: ವ್ಯಭಿಚಾರ ಶಿಕ್ಷಾರ್ಹ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಸಾಮಾಜಿಕ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಇದು ವಸಾಹತು ಸಂದರ್ಭದ, ಓಬಿರಾಯನ ಕಾಲದ ಕಾನೂನು ಆಗಿತ್ತು. ಈ ಕಾನೂನು ಮಹಿಳೆಯನ್ನು ಗಂಡನ ಸೊತ್ತು ಎಂದೇ ಪರಿಗಣಿಸಿತ್ತು. ಅದನ್ನು ರದ್ದು ಮಾಡಿರುವುದು ಪ್ರಗತಿಪರವಾದ ಕ್ರಮ ಎಂದು ಹಲವರು ಪ್ರತಿಪಾದಿಸಿದ್ದಾರೆ.
‘ಸುಪ್ರೀಂ ಕೋರ್ಟ್‌ನಿಂದ ಇನ್ನೊಂದು ಅತ್ಯುತ್ತಮವಾದ ತೀರ್ಪು ಬಂದಿದೆ. ಬೇರೊಬ್ಬನ ಹೆಂಡತಿಯ ಜತೆಗೆ ಲೈಂಗಿಕ ಸಂಬಂಧ ಹೊಂದುವ ಪುರುಷನ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ 497ನೇ ಸೆಕ್ಷನ್ ಮಹಿಳೆಯನ್ನು ಗಂಡನ ಸೊತ್ತು ಎಂದು ಪರಿಗಣಿಸುತ್ತಿತ್ತು’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದೆ ಮತ್ತು ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಸುಷ್ಮಿತಾ ದೇವ್ ಅವರು ಸುಪ್ರೀಂ ಕೋರ್ಟ್ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೆಕ್ಷನ್ ಅನ್ನು ಬಹಳ ಹಿಂದೆಯೇ ರದ್ದು ಮಾಡಬೇಕಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
‘ಅಕ್ರಮ ಸಂಬಂಧಕ್ಕೆ ‘ಸುಪ್ರೀಂ’ ಲೈಸೆನ್ಸ್’
ಸುಪ್ರೀಂ ಕೋರ್ಟ್‌ನ ತೀರ್ಪು ಮಹಿಳಾ ವಿರೋಧಿಯಾಗಿದೆ. ಅಕ್ರಮ ಸಂಬಂಧ ಹೊಂದಲು ಜನರಿಗೆ ಲೈಸೆನ್ಸ್ ಕೊಟ್ಟಂತಾಗಿದೆ ಎಂದು ಕೆಲವು ಸಾಮಾಜಿಕ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.
ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸಿರುವ ಕ್ರಮವು ಮಹಿಳೆಯರ ನೋವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
‘ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ಮಹಿಳಾ ವಿರೋಧಿ ತೀರ್ಪು. ಮದುವೆಯಾಗುವುದರ ಜತೆಗೆ ವಿವಾಹೇತರ ಸಂಬಂಧವನ್ನೂ ಇರಿಸಿಕೊಳ್ಳಲು ಈ ತೀರ್ಪು ಅವಕಾಶ ಕೊಟ್ಟಿದೆ’ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆ ಅವರಿಗೂ ತೀರ್ಪು ಸಮಾಧಾನ ತಂದಿಲ್ಲ. ಈ ತೀರ್ಪು ದೇಶದಲ್ಲಿ ಬಹುವಿವಾಹಕ್ಕೆ ಅವಕಾಶ ಕೊಡುವುದೇ ಎಂದು ಅವರು ಪ‍್ರಶ್ನಿಸಿದ್ದಾರೆ.
‘ಗಂಡಸರು ಎರಡು ಅಥವಾ ಮೂರು ಮದುವೆ ಆಗುವುದು ವಿರಳ ಏನಲ್ಲ. ಎರಡನೇ ಮದುವೆಯಾದಾಗ ಮೊದಲ ಹೆಂಡತಿಯನ್ನು, ಮೂರನೇ ಮದುವೆಯಾದಾಗ ಎರಡನೇ ಹೆಂಡತಿಯನ್ನು ಕೈಬಿಡುವುದು ಸಾಮಾನ್ಯ. ವ್ಯಭಿಚಾರವು ಅಪರಾಧ ಅಲ್ಲ ಎಂದಾದರೆ ತಮ್ಮನ್ನು ಬಿಟ್ಟುಹೋಗುವ ಗಂಡನ ವಿರುದ್ಧ ಹೆಂಡತಿಯು ದೂರು ದಾಖಲಿಸುವುದಾದರೂ ಹೇಗೆ’ ಎಂದು ಅವರು ಕೇಳಿದ್ದಾರೆ.
ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಇದು ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸಿದ್ದಕ್ಕೆ ಸಮಾನವಾದ ತೀರ್ಪು. ಈಗ ಹೆಂಡತಿಯನ್ನು ಗಂಡ ಬಿಟ್ಟು ಹೋದರೂ ತಲಾಖ್ ಕೊಡದೆ ಇರಬಹುದು. ಗಂಡಸರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಬಹುದು. ಇದು ಮಹಿಳೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಈ ಬಗ್ಗೆ ನ್ಯಾಯಾಲಯವು
ಇನ್ನಷ್ಟು ಸ್ಪಷ್ಟತೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.
ಕೇಂದ್ರದ ಪ್ರತಿಪಾದನೆಗೆ ಸೊಪ್ಪು ಹಾಕದ ‘ಸುಪ್ರೀಂ’
ಅಕ್ಟೋಬರ್ 10, 2017:ಇದು ತಾರತಮ್ಯ
ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವ ಮತ್ತು ಪುರುಷನಿಗಷ್ಟೇ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅನಿವಾಸಿ ಭಾರತೀಯ ಜೋಸೆಫ್ ಶೈನ್ ಅವರಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ. ‘ಈ ಸೆಕ್ಷನ್ ಪುರುಷನಿಗೆ ತಾರತಮ್ಯ ಎಸಗುತ್ತದೆ. ಅಲ್ಲದೆ ಸಂವಿಧಾನದ 14, 15 ಮತ್ತು 21ನೇ ವಿಧಿಯನ್ನು ಈ ಸೆಕ್ಷನ್ ಉಲ್ಲಂಘಿಸುತ್ತದೆ’ ಎಂಬುದು ಶೈನ್ ಅವರ ಪ್ರತಿಪಾದನೆ
ಡಿಸೆಂಬರ್ 8:ವಿಚಾರಣೆಗೆ ಒಪ್ಪಿಗೆ
ಸೆಕ್ಷನ್ 497ರ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಒಪ್ಪಿಕೊಂಡ ಸುಪ್ರೀಂ ಕೋರ್ಟ್
ಜನವರಿ 5, 2018:ಸಂವಿಧಾನ ಪೀಠಕ್ಕೆ...
ಅರ್ಜಿಯ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಜುಲೈ 11:ಮದುವೆಗೆ ಧಕ್ಕೆ– ಕೇಂದ್ರದ ವಾದ
‘ಮದುವೆ ಎಂಬುದು ಒಂದು ಸಾಮಾಜಿಕ ಸಂಸ್ಥೆ. ಸೆಕ್ಷನ್ 497ನ್ನು ರದ್ದುಪಡಿಸುವುದರಿಂದ ಮದುವೆ ಎಂಬ ಸಂಸ್ಥೆಗೆ ಧಕ್ಕೆಯಾಗುತ್ತದೆ’ ಎಂದು ತನ್ನ ನಿಲುವನ್ನು ಕೇಂದ್ರ ಸರ್ಕಾರವು ಪೀಠದ ಎದುರು ಸ್ಪಷ್ಟಪಡಿಸಿತು
ಆಗಸ್ಟ್ 1:ವಿಚಾರಣೆ ಆರಂಭಿಸಿದ ಸಂವಿಧಾನ ಪೀಠ
ಆಗಸ್ಟ್ 2:‘ಸಮಾನತೆಯ ಹಕ್ಕಿನ ಉಲ್ಲಂಘನೆ’
‘ವೈವಾಹಿಕ ಬದ್ಧತೆ, ಮತ್ತು ಪಾವಿತ್ರ್ಯವೂ ಬಹಳ ಮುಖ್ಯವಾದ ವಿಚಾರ. ಆದರೆ ಸಂವಿಧಾನವು ಕೊಟ್ಟಿರುವ ಸಮಾನತೆಯ ಹಕ್ಕನ್ನುಸೆಕ್ಷನ್ 497 ಉಲ್ಲಂಘಿಸುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು
ಆಗಸ್ಟ್ 8:ಸೆಕ್ಷನ್ ಉಳಿಯಬೇಕು
497ನೇ ಸೆಕ್ಷನ್ ಅನ್ನು ಉಳಿಸಿಕೊಳ್ಳಬೇಕು ಎಂದ ಕೇಂದ್ರ ಸರ್ಕಾರ. ‘ವ್ಯಭಿಚಾರವು ಸಾಮಾಜಿಕವಾಗಿ ತಪ್ಪು. ವ್ಯಭಿಚಾರದಿಂದ ಸಂಗಾತಿಗೆ, ದಂಪತಿಯ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಯಾಗುತ್ತದೆ’ ಎಂದು ಪ್ರತಿಪಾದಿಸಿದ ಕೇಂದ್ರ ಸರ್ಕಾರ
ತೀರ್ಪು ಕಾಯ್ದಿರಿಸಿದ ಪೀಠ:ಆರು ದಿನಗಳ ವಿಚಾರಣೆಯನ್ನು ಪೀಠವು ಪೂರ್ಣಗೊಳಿಸಿತು. ತೀರ್ಪನ್ನು ಕಾಯ್ದಿರಿಸಿತು
ಸೆಪ್ಟೆಂಬರ್ 27:ಇದು ಅಸಾಂವಿಧಾನಿಕ
‘ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕ’ ಎಂದು ತೀರ್ಪು ನೀಡಿದ ಪೀಠವು, ಅದನ್ನು ರದ್ದು ಮಾಡಿತು
ಆಧಾರ: ಪಿಟಿಐ
***
ಪ್ರತಿಕ್ರಿಯೆಗಳು
ಲಿಂಗ ತಟಸ್ಥ ತೀರ್ಪು
ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ ಅಪ್ರಸ್ತುತ ಕಾನೂನನ್ನು ರದ್ದು ಮಾಡಿರುವ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆ ಆಕೆಯ ಗಂಡನ ಆಸ್ತಿಯಲ್ಲ. ಇದು ಮಹಿಳೆಯರ ಪರವಾದ ತೀರ್ಪು ಮಾತ್ರವಲ್ಲ. ಬದಲಿಗೆ ಲಿಂಗ ತಟಸ್ಥ ತೀರ್ಪೂ ಹೌದು.
–ರೇಖಾ ಶರ್ಮಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ
*
ಮಹಿಳಾ ವಿರೋಧಿ
ವ್ಯಭಿಚಾರದಲ್ಲಿ ತೊಡಗುವ ಪುರುಷ ಮತ್ತು ಮಹಿಳೆ ಇಬ್ಬರನ್ನೂ ಶಿಕ್ಷೆಯ ವ್ಯಾಪ್ತಿಗೆ ತಂದು ಈ ಸೆಕ್ಷನ್ ಅನ್ನು ಲಿಂಗ ತಟಸ್ಥವಾಗಿಸಬೇಕಿತ್ತು. ಆದರೆ ವ್ಯಭಿಚಾರವನ್ನೇ ಅಪರಾಧಮುಕ್ತಗೊಳಿಸಲಾಗಿದೆ. ಇದರಿಂದ ಮಹಿಳೆಯರಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದು ಮಹಿಳಾ ವಿರೋಧಿ ತೀರ್ಪು.
–ಸ್ವಾತಿ ಮಲಿವಾಲ್, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ
*
ಈ ಕಾನೂನು ಅಪ್ರಸ್ತುತವಾಗಿತ್ತು
ಮಹಿಳೆಯು ಆಕೆಯ ಗಂಡನ ಆಸ್ತಿ ಎಂದು ಪರಿಗಣಿಸಲಾಗುತ್ತಿದ್ದ ಮನಸ್ಥಿತಿಯ, ವಸಾಹತುಶಾಹಿ ಕಾಲದ ಪಳೆಯುಳಿಕೆಯಾಗಿದ್ದ ಈ ಕಾನೂನು ಈಗಿನ ಆಧುನಿಕ ಸಮಾಜದಲ್ಲಿ ಅಪ್ರಸ್ತುತವಾಗಿತ್ತು. ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಇನ್ನೂ ಹಲವು ಲಿಂಗಸೂಕ್ಷ್ಮ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡುತ್ತದೆ ಎಂದು ಆಶಿಸೋಣ.
–ಅಸ್ಮಿತಾ ಬಸು, ಅಮ್ನೆಸ್ಟಿ ಇಂಡಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.