ನವದೆಹಲಿ:ಸರ್ದಾರ್ ಸರೋವರ ಯೋಜನೆಗಾಗಿ ಕಳೆದುಕೊಂಡ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಜಾಗೊಳಿಸಿರುವ ಸುಪ್ರೀಂ ಕೋರ್ಟ್,ಸಂವಿಧಾನದ 142ನೇ ಪರಿಚ್ಛೇದ ಅಡಿ ಪ್ರತಿ ಕುಟುಂಬಕ್ಕೆ ನಿಗದಿಪಡಿಸಿರುವ ₹ 60 ಲಕ್ಷ ಮಿತಿ ಮಾರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ನರ್ಮದಾ ನದಿ ಯೋಜನೆಗಾಗಿ 4.293 ಹೆಕ್ಟೇರ್ ಭೂಮಿ ಕಳೆದುಕೊಂಡ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಮಹಿಳೆ ಪರ ವಕೀಲ ಸಂಜಯ್ ಪಾರೀಖ್ ಪ್ರಕಾರ, ನರ್ಮದಾ ಜಲ ವಿವಾದಗಳ ನ್ಯಾಯಮಂಡಳಿಯು 4.293 ಹೆಕ್ಟೇರ್ ನಷ್ಟದ ಪರಿಹಾರಕ್ಕಾಗಿ ಮಾನದಂಡ ನಿಗದಿಪಡಿಸಿದೆ. ನ್ಯಾಯಮಂಡಳಿಯ ತೀರ್ಪು ಬದ್ಧವಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸಬೇಕು ಎಂದು ಅವರು ವಾದಿಸಿದರು.
ಸುಪ್ರೀಂ ಕೋರ್ಟ್ ಘೋಷಿಸಿದ ಗರಿಷ್ಠಪರಿಮಿತಿ ಅನುಗುಣವಾಗಿ ಮಹಿಳೆ ₹1.28 ಕೋಟಿ ಪರಿಹಾರ ಬದಲಾಗಿ ₹ 60 ಲಕ್ಷ ಪಡೆದಿದ್ದಾರೆ. ಕಳೆದುಕೊಂಡಿರುವ ಭೂಮಿಗೆ ತಕ್ಕಂತೆ ಪರಿಹಾರ ನಿಗದಿ ಮಾಡಬೇಕು ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ಪ್ರತಿ ಕುಟುಂಬಕ್ಕೆ ₹60 ಲಕ್ಷ ಅಂತಿಮ ಪರಿಹಾರ ಪ್ಯಾಕೇಜ್ ನಿರ್ಧರಿಸಿದ ನಂತರ, ಸುಪ್ರೀಂ ಕೋರ್ಟ್‌ನ ಆದೇಶದ ವಸ್ತುನಿಷ್ಠ ಪರಿಶೀಲನೆ ಆಗಿರುವುದರಿಂದ ಮಾರ್ಪಾಡು ಆಗುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.