ADVERTISEMENT

ದಾಂದಲೆ ತಡೆಗೆ ಇನ್ನುಮುಂದೆ ಸುಪ್ರೀಂ ಕೋರ್ಟ್‌ ರೂಪಿಸಲಿದೆ ಸೂತ್ರ

ಸರ್ಕಾರವನ್ನು ಕಾಯದೆ ಮಾರ್ಗದರ್ಶಿ ರೂಪಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 19:30 IST
Last Updated 10 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಅಥವಾ ಖಾಸಗಿ ಆಸ್ತಿಯನ್ನು ಧ್ವಂಸ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದೇಶದಾದ್ಯಂತ ನಡೆಯುತ್ತಿರುವ ದಾಂದಲೆಗಳನ್ನು ತಡೆಯುವುದಕ್ಕೆ ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದಾಗಿಯೂ ತಿಳಿಸಿದೆ.

ದಾಂದಲೆಯಂತಹ ಸಂದರ್ಭದಲ್ಲಿ ಯಾವ ಅಧಿಕಾರಿಯ ಮೇಲೆ ಹೊಣೆಗಾರಿಕೆ ನಿಗದಿ ಮಾಡಬೇಕು ಎಂಬುದನ್ನು ನಿರ್ಧರಿಸಲು ಅಗತ್ಯವಾದ ಕಾನೂನನ್ನು ಸರ್ಕಾರವು ರಚಿಸುವವರೆಗೆ ಕಾಯುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ದಾಂದಲೆಗೆ ಕುಮ್ಮಕ್ಕು ನೀಡುವವರು ಮತ್ತು ದಾಂದಲೆ ನಡೆಸುವವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ವಿವರಗಳು ಮಾರ್ಗದರ್ಶಿ ಸೂತ್ರದಲ್ಲಿ ಇರುತ್ತದೆ. ಇಂತಹ ಕ್ರಮ ಕೈಗೊಳ್ಳುವಾಗ ಧರ್ಮ ಒಂದು ಪರಿಗಣನೆಯ ವಿಷಯವೇ ಅಲ್ಲ ಎಂದು ಪೀಠ ತಿಳಿಸಿತು.

ADVERTISEMENT

ದಾಂದಲೆ ಮತ್ತು ಗಲಭೆಗಳು ನಡೆದಾಗ ಆ ಪ್ರದೇಶದ ಎಸ್‌ಪಿಯ ಮೇಲೆಯೇ ಜವಾಬ್ದಾರಿ ಹೊರಿಸಬಹುದು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಸಲಹೆ ನೀಡಿದರು.

‘ದೇಶದ ಒಂದಲ್ಲ ಒಂದು ಭಾಗದಲ್ಲಿ ಪ್ರತಿ ವಾರವೂ ಒಂದಲ್ಲ ಒಂದು ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ’ ಎಂದು ವೇಣುಗೋಪಾಲ್‌ ಹೇಳಿದರು. ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯ ನಡೆಸುತ್ತಿರುವ ಪ್ರತಿಭಟನೆ, ಎಸ್‌ಸಿ/ಎಸ್‌ಟಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ನಂತರ ದೇಶವ್ಯಾಪಿ ನಡೆದ ಪ್ರತಿರೋಧ ಮತ್ತು ಇತ್ತೀಚೆಗೆ ಕನ್ವರಿಯಾಗಳು ನಡೆಸಿದ ದಾಂದಲೆಯನ್ನು ಅವರು ಉಲ್ಲೇಖಿಸಿದರು.

ಕಳೆದ ವರ್ಷ ‘ಪದ್ಮಾವತ್‌’ ಸಿನಿಮಾ ಬಿಡುಗಡೆ ಆದಾಗ ನಾಯಕ ನಟಿಯ ಮೂಗು ಕೊಯ್ಯುವುದಾಗಿ ಒಂದು ಗುಂಪು ಬೆದರಿಸಿತ್ತು. ಆದರೆ ಅದರ ಬಗ್ಗೆ ಒಂದು ಎಫ್‌ಐಆರ್‌ ಕೂಡ ದಾಖಲಾಗಿಲ್ಲ ಎಂಬುದರತ್ತ ಅವರು ಗಮನ ಸೆಳೆದರು. ದೆಹಲಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾದರೆ ಆ ಪ್ರದೇಶದ ಉಸ್ತುವಾರಿ ಹೊಂದಿರುವ ಪೊಲೀಸ್‌ ಅಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ. ಅದೇ ರೀತಿ, ದಾಂದಲೆ ನಡೆದರೆ ಆ ಪ್ರದೇಶದ ಉಸ್ತುವಾರಿ ಇರುವ ಪೊಲೀಸ್‌ ಅಧಿಕಾರಿಗೆ ಜವಾಬ್ದಾರಿ ಹೊರಿಸಬೇಕು ಎಂದು ವೇಣುಗೋಪಾಲ್‌ ವಾದಿಸಿದರು.

ಕರೆ ನೀಡಿದವರೇ ಹೊಣೆ
ಸರ್ಕಾರಿ ಮತ್ತು ಖಾಸಗಿ ಆಸ್ತಿ ನ‌ಷ್ಟಕ್ಕೆ ಸಂಬಂಧಿಸಿ 2009ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚನೆ ನೀಡಬೇಕು ಎಂದು ಕೊಡುಂಗಲ್ಲೂರು ಫಿಲಂ ಸೊಸೈಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ನಿಲುವು ತಳೆದಿದೆ.

ಪ್ರತಿಭಟನೆ ಸಂದರ್ಭದಲ್ಲಿ ಆಸ್ತಿಗೆ ಹಾನಿಯಾದರೆ ಪ್ರತಿಭಟನೆಗೆ ಕರೆ ನೀಡಿದವರೇ ಹೊಣೆಗಾರರು ಎಂದು 2009ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪ್ರತಿಭಟನೆಯನ್ನು ಪೊಲೀಸರು ವಿಡಿಯೊ ಚಿತ್ರೀಕರಣ ಮಾಡಬೇಕು. ಆ ಮೂಲಕ ದಾಂದಲೆಯಲ್ಲಿ ತೊಡಗಿದವರನ್ನು ಗುರುತಿಸಬೇಕು ಎಂದೂ ಕೋರ್ಟ್‌ ನಿರ್ದೇಶನ ನೀಡಿತ್ತು.
**
ಹಿಂಸಾತ್ಮಕ ಪ್ರತಿಭಟನೆ ತಡೆಯಲು ಬೇಕಾದಂತೆ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಚಿಂತಿಸುತ್ತಿದೆ. ಕಾನೂನು ಬದಲಾಯಿಸಲು ಸುಪ್ರೀಂ ಕೋರ್ಟ್‌ ಅವಕಾಶ ಕೊಡಬೇಕು.
–ಕೆ.ಕೆ. ವೇಣುಗೋಪಾಲ್‌, ಅಟಾರ್ನಿ ಜನರಲ್‌

ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಗುಂಪು ಹಲ್ಲೆ ತಡೆಗೆ ಕಾನೂನು ರೂಪಿಸಿದಂತೆ ಮಾರ್ಗದರ್ಶಿ ಸೂತ್ರ ರೂಪಿಸುತ್ತೇವೆ. ಸರ್ಕಾರವು ಕಾನೂನು ತಿದ್ದುಪಡಿ ಮಾಡುವವರೆಗೆ ಕಾಯಲು ಸಾಧ್ಯವಿಲ್ಲ.
– ಸುಪ್ರೀಂ ಕೋರ್ಟ್‌ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.