ಪಣಜಿ: ‘ಉತ್ತಮ ಭವಿಷ್ಯಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಜನರ ನ್ಯಾಯಾಲಯವಾಗಿ ಉಳಿಸಿಕೊಳ್ಳಬೇಕೇ ಹೊರತು, ಸಂಸತ್ತಿನಲ್ಲಿ ವಿರೋಧ ಪಕ್ಷದ ಪಾತ್ರ ನಿರ್ವಹಿಸಲು ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ದಕ್ಷಿಣ ಗೋವಾದಲ್ಲಿ ಶನಿವಾರ ನಡೆದ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್‌ನ ಮೊದಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕರಣವೊಂದರ ತೀರ್ಪು ಹಾಗೂ ಅದರಲ್ಲಿ ಇರಬಹುದಾದ ಲೋಪದ ಕುರಿತು ನ್ಯಾಯಾಲಯವನ್ನು ಟೀಕಿಸಬಹುದೇ ಹೊರತು ಅದರ ಕೆಲಸ ಮತ್ತು ಫಲಿತಾಂಶಗಳ ದೃಷ್ಟಿಕೋನದಿಂದ ಪ್ರಶ್ನಿಸಲಾಗದು. ಕಳೆದ 75 ವರ್ಷಗಳಿಂದ ಕಟ್ಟಲಾಗಿರುವ ಸುಪ್ರೀಂ ಕೋರ್ಟ್‌ನ ನ್ಯಾಯದ ಮಾದರಿಯನ್ನು ನಾವು ಕಳೆದುಕೊಳ್ಳಬಾರದು’ ಎಂದು ಅವರು ತಿಳಿಸಿದ್ದಾರೆ.
‘ಸಮಾಜವು ಅಭಿವೃದ್ಧಿ ಕಂಡು, ಸಮೃದ್ಧಿಯ ವಿಕಸನದಲ್ಲಿರುವಾಗ ಎಲ್ಲವನ್ನೂ ವಿಶಾಲವಾಗಿ ನೋಡುವ ಹಾಗೂ ದೊಡ್ಡದನ್ನು ಬಯಸುವ ಪ್ರವೃತ್ತಿ ಇದೆ. ಆದರೆ ನ್ಯಾಯಾಲಯಗಳು ಅದರಂತೆ ಕೆಲಸ ಮಾಡುವುದಿಲ್ಲ. ನಮ್ಮದು ಜನರ ನ್ಯಾಯಾಲಯ. ಸುಪ್ರೀಂ ಕೋರ್ಟ್ ಎಂದರೆ ಜನರ ನ್ಯಾಯಾಲಯ ಎಂಬುದನ್ನು ನಾವು ಭವಿಷ್ಯಕ್ಕಾಗಿ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
‘ಇಂದಿನ ದಿನಗಳಲ್ಲಿ, ಭಿನ್ನ ಅಭಿಪ್ರಾಯವುಳ್ಳವರ ಎರಡು ಗುಂಪುಗಳಾಗಿವೆ. ಸುಪ್ರೀಂ ಕೋರ್ಟ್‌ನ ತೀರ್ಪು ತಮ್ಮ ಬಯಕೆಯಂತೆಯೇ ಇದ್ದರೆ, ನ್ಯಾಯಾಲಯವನ್ನು ಹೊಗಳುವುದು ಹಾಗೂ ವಿರುದ್ಧವಾಗಿ ಬಂದರೆ ಟೀಕಿಸುವ ಪ್ರವೃತ್ತಿ ಬೆಳೆದಿದೆ. ಆದರೆ ಪ್ರತಿ ಪ್ರಕರಣದ ಆಧಾರದಲ್ಲಿ ತಮ್ಮ ತೀರ್ಪು ನೀಡಲು ನ್ಯಾಯಮೂರ್ತಿಗಳು ಸ್ವತಂತ್ರರಾಗಿದ್ದಾರೆ. ಹೀಗಾಗಿ ಯಾವುದೇ ಪ್ರಕರಣದ ತೀರ್ಪು ಒಬ್ಬರ ಪರವಾಗಿ ಅಥವಾ ಮತ್ತೊಬ್ಬರ ವಿರುದ್ಧವಾಗಿಯೇ ಇರುವುದು ಸಹಜ. ಆದರೆ ನ್ಯಾಯಾಂಗ ಕ್ಷೇತ್ರದಲ್ಲಿರುವವರಿಗೆ ಇದನ್ನು ಅರಿಯುವ ಕನಿಷ್ಠ ಜ್ಞಾನ ಇರಬೇಕು’ ಎಂದಿದ್ದಾರೆ.
‘ಆಧುನಿಕತೆಗೆ ಸುಪ್ರೀಂ ಕೋರ್ಟ್ ತೆರೆದುಕೊಳ್ಳುತ್ತಿದ್ದು, ತಂತ್ರಜ್ಞಾನವನ್ನ ಅಳವಡಿಸಿಕೊಳ್ಳುವತ್ತ ದಾಪುಗಾಲಿಡುತ್ತಿದೆ. ಇ–ಫೈಲಿಂಗ್, ಪ್ರಕರಣದ ದಾಖಲೆಗಳ ಡಿಜಿಟಲೀಕರಣ, ಸಂವಿಧಾನ ಪೀಠದ ಕಲಾಪಗಳು ಮಾತಿನಿಂದ ಬರವಣಿಗೆಗೆ ಅಥವಾ ನೇರ ಪ್ರಸಾರಗೊಳ್ಳಲಿದೆ. ಅದರಲ್ಲೂ ನೇರ ಪ್ರಸಾರ ನ್ಯಾಯಾಂಗ ಕ್ಷೇತ್ರದ ದಿಕ್ಕನ್ನೇ ಬದಲಿಸಿದೆ. ಮೊದಲಿಗೆ ಒಂದು ಕಲಾಪವನ್ನು 25ರಿಂದ 50 ಜನ ನೋಡಿದರೆ ಹೆಚ್ಚು. ಆದರೆ ಈಗ ನೇರ ಪ್ರಸಾರದ ಮೂಲಕ ಏಕಕಾಲಕ್ಕೆ 20 ಲಕ್ಷ ಜನ ವೀಕ್ಷಿಸುತ್ತಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.