ADVERTISEMENT

ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂಬ ಆದೇಶ ಪ್ರಶ್ನಿಸಿದ್ದ ಶರದ್ ಪವಾರ್ ಬಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:27 IST
Last Updated 29 ಜುಲೈ 2024, 16:27 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣವೇ ನಿಜವಾದ ಎನ್‌ಸಿಪಿ ಎಂದು ವಿಧಾನಸಭೆ ಸ್ಪೀಕರ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಎನ್‌ಸಿಪಿ (ಶರದ್ ಪವಾರ್ ಬಣ) ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಮತ್ತು ಅವರನ್ನು ಬೆಂಬಲಿಸಿದ ಶಾಸಕರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. 

ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಈ ಸಂಬಂಧ ಅಜಿತ್ ಪವಾರ್ ಗುಂಪು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ಸೂಚಿಸಿದೆ. ಅಲ್ಲದೆ, ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಇತರ ಶಾಸಕರ ವಿರುದ್ಧ ಇದೇ ರೀತಿಯ ಆರೋಪ ಸಂಬಂಧ ಶಿವಸೇನಾದ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ಪೀಠ ನಿರ್ಧರಿಸಿತು. 

ಈ ಸಂಬಂಧ ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಮತ್ತು ಇತರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ‘ಮಹಾರಾಷ್ಟ್ರದ ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. ಹೀಗಾಗಿ ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು’ ಎಂದು ಕೋರಿದರು. 

ADVERTISEMENT

ನಾವು ಈಗ ನೋಟಿಸ್ ನೀಡುತ್ತೇವೆ. ಈ ಪ್ರಕರಣ ಇತ್ಯರ್ಥದ ಅಂತಿಮ ಹಂತದಲ್ಲಿ ಎಲ್ಲಾ ಆಕ್ಷೇಪಣೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪೀಠ ತಿಳಿಸಿದೆ. 

ಫೆಬ್ರುವರಿ 15ರಂದು ಶರದ್ ಪವಾರ್ ವಿರುದ್ಧ ಬಂಡಾಯ ಸಾರಿ, ಬಿಜೆಪಿ–ಶಿವಸೇನಾ (ಶಿಂದೆ ಬಣ) ಮೈತ್ರಿ ಸರ್ಕಾರವನ್ನು ಸೇರಿದ್ದ ಅಜಿತ್ ಪವಾರ್ ನೇತೃತ್ವದ ಬಣವನ್ನು ನಿಜವಾದ ಎನ್‌ಸಿಪಿ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದರು. ಅಲ್ಲದೆ, ಅಜಿತ್ ಪವಾರ್ ಹಾಗೂ ಅವರ ಬೆಂಬಲಿತ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ವಿರೋಧಿ ಗುಂಪಿನ ಕೋರಿಕೆಯನ್ನು ತಿರಸ್ಕರಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.