ನವದೆಹಲಿ: ಮಣಿಪುರದಲ್ಲಿನ ಹಿಂಸಾಚಾರ ಕುರಿತು ಪ್ರಕಟಿಸಿರುವ ವರದಿಗೆ ಸಂಬಂಧಿಸಿ ಭಾರತೀಯ ಸಂಪಾದಕರ ಒಕ್ಕೂಟದ (ಇಜಿಐ) ನಾಲ್ವರ ಸದಸ್ಯರ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ಅನ್ವಯ ಅವರ ವಿರುದ್ದ ಸೆ.11ರ ವರೆಗೆ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಮಣಿಪುರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.
ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಹಿನ್ನೆಲೆಯಲ್ಲಿ ಒಕ್ಕೂಟದ ನಾಲ್ವರ ಸದಸ್ಯರಿದ್ದ ಸತ್ಯಶೋಧನಾ ತಂಡ ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿ, ವರದಿ ಪ್ರಕಟಿಸಿತ್ತು. ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು ಮಾಧ್ಯಮಗಳ ಕಾರ್ಯ ನಿರ್ವಹಣೆಗೆ ತೊಂದರೆಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.
‘ಒಕ್ಕೂಟ ಪ್ರಕಟಿಸಿದ್ದ ವರದಿ ಪ್ರಚೋದನಕಾರಿಯಾಗಿದೆ’ ಎಂದು ಆರೋಪಿಸಿದ್ದ ರಾಜ್ಯ ಸರ್ಕಾರ, ಈ ಸಂಬಂಧ ಒಕ್ಕೂಟದ ಅಧ್ಯಕ್ಷೆ ಸೀಮಾ ಮುಸ್ತಾಫ, ಸದಸ್ಯರಾದ ಸೀಮಾ ಗುಹಾ, ಭರತ್ ಭೂಷಣ್ ಹಾಗೂ ಸಂಜಯ್ ಕಪೂರ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.