ನವದೆಹಲಿ: ಅಸ್ಸಾಂನಲ್ಲಿರುವ ವಿದೇಶಿ ಪ್ರಜೆಗಳ ನ್ಯಾಯಮಂಡಳಿಗಳುಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ವಿದೇಶಿ ಪ್ರಜೆಗಳ ನ್ಯಾಯಮಂಡಳಿಗಳ ಕುರಿತು ಮಾ. 27ರೊಳಗೆ ಮಾಹಿತಿನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಬಂಧನ ಕೇಂದ್ರಗಳಲ್ಲಿರುವ ವಿದೇಶಿ ಪ್ರಜೆಗಳ ಕಷ್ಟ ಕುರಿತು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
‘ಭಾರತೀಯರಲ್ಲ ಎನ್ನುವ ಕಾರಣದಿಂದ ವಿದೇಶಿ ಪ್ರಜೆಗಳನ್ನು ಅನಿಶ್ಚಿತ ಅವಧಿಗೆ ವಶದಲ್ಲಿ ಇರಿಸಿಕೊಳ್ಳಲಾಗಿದೆ. ಈ ಕೇಂದ್ರಗಳಲ್ಲಿ ಮನುಷ್ಯರು ವಾಸಿಸುವ ಸ್ಥಿತಿ ಇಲ್ಲ’ ಎಂದು ಆರೋಪಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರನ್ನೂ ಒಳಗೊಂಡ ನ್ಯಾಯಪೀಠ, ‘ರಾಜ್ಯದಲ್ಲಿ ವಿದೇಶಿ ಪ್ರಜೆಗಳ ನ್ಯಾಯಮಂಡಳಿಗಳ ಕೊರತೆ ಇದೆಯೆ ಹಾಗೂ ಇವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅಫಿಡವಿಟ್ ಸಲ್ಲಿಸಬೇಕು. ಜತೆಗೆ ಬಂಧನ ಕೇಂದ್ರಗಳು ಯಾವ ಸ್ಥಿತಿಯಲ್ಲಿವೆ ಎಂದು ತಿಳಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.