ADVERTISEMENT

ಪೊಲೀಸರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಲಿ: ಸುಪ್ರೀಂ ಕೋರ್ಟ್

370ನೇ ವಿಧಿ ಅಡಿಯ ವಿಶೇಷ ಸ್ಥಾನಮಾನ ರದ್ದತಿ ಟೀಕಿಸಿದ್ದ ಪ್ರಾಧ್ಯಾಪಕನ ವಿರುದ್ಧದ ಎಫ್‌ಐಆರ್ ರದ್ದು

ಪಿಟಿಐ
Published 8 ಮಾರ್ಚ್ 2024, 14:21 IST
Last Updated 8 ಮಾರ್ಚ್ 2024, 14:21 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ‘ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಕಲ್ಪನೆ ಕುರಿತು ಪೊಲೀಸ್‌ ವ್ಯವಸ್ಥೆಗೆ ಅರಿವು ಮೂಡಿಸುವ ಕಾಲ ಬಂದಿದೆ’ ಎಂದು ಸುಪ್ರೀಂ ಕೋರ್ಟ್‌ಹೇಳಿದೆ.

ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮವನ್ನು ಟೀಕಿಸಿದ್ದಕ್ಕೆ ಹಾಗೂ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ ರಾಷ್ಟ್ರದ ಪ್ರಜೆಗಳಿಗೆ ಶುಭಾಶಯ ಕೋರಿದ್ದಕ್ಕಾಗಿ ಪ್ರಾಧ್ಯಾಪಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಬಾಂಬೆ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ADVERTISEMENT

ನ್ಯಾಯಮೂರ್ತಿಗಳಾದ ಅಭಯ್ ಎಸ್‌.ಓಕಾ ಹಾಗೂ ಉಜ್ಜಲ್‌ ಭುಯಾನ್ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

‘ಸಂವಿಧಾನದ 19(1)(ಎ) ವಿಧಿಯು ಪ್ರತಿಯೊಬ್ಬರಿಗೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಸಂವಿಧಾನದತ್ತವಾದ ಈ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಪೊಲೀಸರನ್ನು ಸಂವೇದನಾಶೀಲರನ್ನಾಗಿ ಮಾಡಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.

ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಟೀಕಿಸಿ ಜಾವೇದ್‌ ಅಹ್ಮದ್‌ ಹಾಜಮ್‌ ಎಂಬ ಪ್ರಾಧ್ಯಾಪಕರು ತಮ್ಮ ವಾಟ್ಸ್‌ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೇ, ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಲ್ಲಿನ ಪ್ರಜೆಗಳಿಗೆ ಅಭಿನಂದಿಸಿದ್ದರು.

‘ಆಗಸ್ಟ್‌ 5– ಜಮ್ಮು–ಕಾಶ್ಮೀರಕ್ಕೆ ಕರಾಳ ದಿನ’ ಹಾಗೂ ‘14ನೇ ಆಗಸ್ಟ್‌–ಪಾಕಿಸ್ತಾನ ಸ್ವಾತಂತ್ರ್ಯದಿನದ ಶುಭಾಶಯ’ ಎಂದು ಅವರು ಪೋಸ್ಟ್‌ ಮಾಡಿದ್ದರು. ಈ ಸಂಬಂಧ, ಕೊಲ್ಹಾಪುರದ ಹಾತ್‌ಕಂಗಲೆ ಪೊಲೀಸ್‌ ಠಾಣೆಯಲ್ಲಿ ಜಾವೇದ್‌ ಅಹ್ಮದ್‌ ವಿರುದ್ಧ, ಐಪಿಸಿ ಸೆಕ್ಷನ್ 153ಎ ಅಡಿ (ಎರಡು ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವುದು) ಎಫ್‌ಐಆರ್‌ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ಆಗಸ್ಟ್‌ 14 ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಆ ದಿನ ಪಾಕಿಸ್ತಾನ ಪ್ರಜೆಗಳಿಗೆ ಶುಭಾಶಯಗಳನ್ನು ತಿಳಿಸುವುದರಲ್ಲಿ ತಪ್ಪೇನಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿವೆ. ಪ್ರಜಾತಾಂತ್ರಿಕ ಮೌಲ್ಯಗಳ ಮಹತ್ವವನ್ನು ದೇಶದ ಜನರು ಅರಿತಿದ್ದಾರೆ. ಅಲ್ಲದೇ, ಕೆಲವು ಪದಗಳು ಸೌಹಾರ್ದವನ್ನು ಕದಡುತ್ತವೆ ಅಥವಾ ದ್ವೇಷ ಭಾವನೆ ಮೂಡಿಸುತ್ತವೆ ಇಲ್ಲವೇ ಎರಡು ಭಿನ್ನ ಧಾರ್ಮಿಕ ಗುಂಪುಗಳ ನಡುವೆ ಹಗೆತನಕ್ಕೆ ಕಾರಣವಾಗುತ್ತವೆ ಎಂಬ ನಿರ್ಣಯಕ್ಕೆ ಬರಲಾಗದು’ ಎಂದು ಹೇಳಿದೆ.

‘ಕೆಲ ವ್ಯಕ್ತಿಗಳು ದ್ವೇಷ ಸೃಷ್ಟಿಸಲು ಯತ್ನಿಸಿರಬಹುದು. ಇದು ಐಪಿಸಿ ಸೆಕ್ಷನ್‌ 153ಎ ಅನ್ವಯಿಸಲು ಸಕಾರಣವಾಗದು ಎಂದು ಹೇಳಿದ ನ್ಯಾಯಪೀಠ, 2023ರ ಏಪ್ರಿಲ್‌ 10ರಂದು ಬಾಂಬೆ ಹೈಕೋರ್ಟ್‌ ಹೊರಡಿಸಿದ ಆದೇಶವನ್ನು ರದ್ದುಗೊಳಿಸಿ, ಎಫ್‌ಐಆರ್‌ ವಜಾಗೊಳಿಸುತ್ತೇವೆ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.