ನವದೆಹಲಿ: ಪ್ರಸಕ್ತ ಸಾಲಿನ ‘ನೀಟ್–ಪಿಜಿ’ ಪರೀಕ್ಷಾ ವಿಧಾನದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
‘ಇದು ಅತ್ಯಂತ ಅಸಹಜ ನಡೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದಿರುವ ಸುಪ್ರೀಂ ಕೋರ್ಟ್, ಈ ಕುರಿತು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣ ಮಂಡಳಿಗೆ (ಎನ್‌ಬಿಇ) ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ವಿದ್ಯಾರ್ಥಿಗಳ ಪರ ಹಾಜರಿದ್ದ ಹಿರಿಯ ವಕೀಲರಾದ ವಿಭಾ ದತ್ತ ಮಖೀಜಾ ಮತ್ತು ತನ್ವಿ ದುಬೆ ಅವರ ವಾದಗಳನ್ನು ಆಲಿಸಿದ ಪೀಠ, ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು.
ವಿಚಾರಣೆ ವೇಳೆ, ‘ಆ.11ರಂದು ‘ನೀಟ್–ಪಿಜಿ’ ನಡೆದಿತ್ತು. ಅಂಕಗಳ ಸಾಮಾನ್ಯೀಕರಣ, ಉತ್ತರಗಳನ್ನು ಪ್ರಕಟಿಸುವ ವಿಧಾನ ಸೇರಿದಂತೆ ಪರೀಕ್ಷಾ ವಿಧಾನದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿತ್ತು’ ಎಂದು ವಕೀಲೆ ವಿಭಾ ಮಖೀಜಾ ಪೀಠಕ್ಕೆ ತಿಳಿಸಿದರು.
‘ಪರೀಕ್ಷೆಗಳನ್ನು ಯಾವ ರೀತಿ ನಡೆಸಬೇಕು ಎಂಬ ಕುರಿತು ಯಾವುದೇ ನಿಯಮಗಳು ಇಲ್ಲ. ಅಧಿಕಾರಿಗಳ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತಿದೆ. ಈ ವಿಚಾರದಲ್ಲಿ ಪ್ರಮಾಣಿತ ವಿಧಾನವೊಂದನ್ನು ರೂಪಿಸುವ ಅಗತ್ಯವಿದೆ’ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಎನ್‌ಬಿಇ ಪರ ವಕೀಲರು, ಇದರಲ್ಲಿ ಹೊಸದು ಅಥವಾ ಅಸಹಜ ಎನ್ನುವಂಥದ್ದು ಏನೂ ಇಲ್ಲ ಎಂದರು.
ಆಗ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್,‘ಇದು ಅತ್ಯಂತ ಅಸಹಜವಾದ ನಡೆ. ಪರೀಕ್ಷೆಗಳು ಆರಂಭವಾಗುವುದಕ್ಕೆ ಮೂರು ದಿನಗಳ ಮೊದಲು ಪರೀಕ್ಷಾ ವಿಧಾನವನ್ನೇ ಬದಲಿಸಿದರೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.