ನವದೆಹಲಿ: ದೆಹಲಿ ಪಾಲಿಕೆಯ ಆರು ಸದಸ್ಯರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಲು ಆತುರ ತೋರಿದ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಕ್ರಮವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ನ್ಯಾ. ಪಿ.ಎಸ್. ನರಸಿಂಹ ಹಾಗೂ ನ್ಯಾ. ಆರ್. ಮಹಾದೇವನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ‘ಸೆ. 27ರಂದು ನಡೆಸಲಾದ ಸ್ಥಾಯಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಮೇಯರ್ ಶೆಲ್ಲಿ ಒಬೆರಾಯ್ ಅವರ ಅರ್ಜಿಯ ವಿಚಾರಣೆಯನ್ನು ಮೊದಲು ನಡೆಸಲಾಗುವುದು. ಅಲ್ಲಿಯವರೆಗೂ ಸ್ಥಾಯಿ ಸಮಿತಿಯ ಅಧ್ಯಕ್ಷೀಯ ಚುನಾವಣೆ ನಡೆಸಬಾರದು’ ಎಂದು ನಿರ್ದೇಶಿಸಿತು.
‘ದೆಹಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದರೆ ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ’ ಎಂದು ದೆಹಲಿ ಸರ್ಕಾರದ ಲೆಫ್ಟಿನೆಂಟ್ ಗವರ್ನರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂಜಯ್ ಜೈನ್ ಅವರಿಗೆ ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಆರಂಭದಲ್ಲಿ ಈ ಅರ್ಜಿಯನ್ನು ಪುರಸ್ಕರಿಸುವ ಇರಾದೆ ಇರಲಿಲ್ಲ. ಆದರೆ ದೆಹಲಿ ನಗರಸಭೆ ಕಾಯ್ದೆ 487ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸೆಕ್ಸೆನಾ ಅವರ ನಿರ್ಧಾರದಿಂದಾಗಿ ಈ ಕ್ರಮ ಕೈಗೊಳ್ಳಬೇಕಾಯಿತು. ಈ ಕಾಯ್ದೆ ಬಳಸುವುದೆಂದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸರಿಯುತ್ತಿದೆ ಎಂದೇ ಅರ್ಥ. ಚುನಾವಣಾ ಪ್ರಕ್ರಿಯೆಯನ್ನು ನೀವು ಹೇಗೆ ನಿಯಂತ್ರಿಸುತ್ತೀರಿ’ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಪ್ರಶ್ನಿಸಿದೆ.
ಈ ಕ್ರಮದ ಕುರಿತು ಎರಡು ವಾರಗಳ ಒಳಗಾಗಿ ಲೆಫ್ಟಿನೆಂಟ್ ಗವರ್ನರ್ ತಮ್ಮ ವರದಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ನ ದಸರಾ ರಜೆಯ ನಂತರ ಅರ್ಜಿಯ ವಿಚಾರಣೆ ಮುಂದುವರಿಸಲಾಗುವುದು ಎಂದು ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.